ಉಡುಪಿ: ಜೂ. 30ರಿಂದ ಮತಗಟ್ಟೆ ಅಧಿಕಾರಿಗಳಿಂದ ಮನೆ ಭೇಟಿ

ಉಡುಪಿ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕರ್ನಾಟಕ ಸಹಿತ 10ಕ್ಕೂ ಹೆಚ್ಚು ರಾಜ್ಯದಲ್ಲಿ ವಿಶೇಷ ಸಮಗ್ರ ಮತದಾರರ ಪಟ್ಟಿ ಪರಿಷ್ಕರಣೆ – 2026 ನಡೆಯಲಿದ್ದು, ಅದರಂತೆ ಉಡುಪಿ ಜಿಲ್ಲೆಯಲ್ಲಿ ಜೂ. 20ರಂದು ಈ ಪ್ರಕ್ರಿಯೆ ಆರಂಭವಾಗಲಿದ್ದು ಜೂ. 30ರಿಂದ ಬಿಎಲ್‌ಒಗಳು ಮನೆ ಮನೆ ಭೇಟಿ ಶುರು ಮಾಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಸ್ವರೂಪಾ ಟಿ.ಕೆ. ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ವಿಶೇಷ ಸಮಗ್ರ ಪರಿಷ್ಕರಣೆ ಸಂಬಂಧಿಸಿದಂತೆ ಪೂರ್ವತಯಾರಿ, ತರಬೇತಿ ಹಾಗೂ ಮುದ್ರಣ ಪ್ರಕ್ರಿಯೆಗಳು ಜೂ. 20ರಿಂದ 29ರ ವರೆಗೆ ನಡೆಯಲಿದೆ. ಜೂ. 30ರಿಂದ ಜು. 29ರವರೆಗೆ ಮತಗಟ್ಟೆ ಅಧಿಕಾರಿ ಮನೆ ಮನೆಗೆ ಭೇಟಿ ನೀಡಲಿದ್ದಾರೆ.

ಜು. 29ರಿಂದ ಮತಗಟ್ಟೆಗಳ ಪುನಃ ವಿಂಗಡನೆ ಕಾರ್ಯ ನಡೆಯಲಿದೆ. ಆ. 5ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದೆ. ಸೆ. 4ರ ವರೆಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇರಲಿದೆ. ಅ. 3ರ ವರೆಗೆ ಆಕ್ಷೇಪಣೆ ಅರ್ಜಿ ವಿಲೇವಾರಿ ನಡೆದು ಅ. 10ರಂದು ಅಂತಿಮ ಮತದಾರರ ಪಟ್ಟಿ ಬಿಡುಗಡೆ ನಡೆಯಲಿದೆ ಎಂದರು.

ಶೇ. 92.55ರಷ್ಟು ಮ್ಯಾಪಿಂಗ್ ಪೂರ್ಣ: ಮತದಾರರ ಪಟ್ಟಿಯನ್ನು ಇನ್ನಷ್ಟು ನಿಖರ, ಸಮಗ್ರ ಹಾಗೂ ದೋಷರಹಿತಗೊಳಿಸುವ ಉದ್ದೇಶದಿಂದ ಈ ವಿಶೇಷ ಪರಿಷ್ಕರಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಪರಿಷ್ಕರಣೆಗೆ ಅರ್ಹತಾ ದಿನಾಂಕ 2026ರ ಅ. 1 ಎಂದು ನಿಗದಿಪಡಿಸಲಾಗಿದೆ.

2025ರ ಮತದಾರರ ಪಟ್ಟಿಯಲ್ಲಿರುವ ಮತದಾರರನ್ನು 2002ರ ಮತದಾರರ ಪಟ್ಟಿಯೊಂದಿಗೆ ಹೊಂದಾಣಿಕೆ (ಮ್ಯಾಪಿಂಗ್) ಮಾಡುವ ಕಾರ್ಯ ಕೈಗೊಳ್ಳಲಾಗಿದೆ. ಈ ವೇಳೆ ಮತದಾರರ ವಿವರ ಪರಿಶೀಲಿಸಿ, ಅವರ ಸಂತತಿ ಮಾಹಿತಿಯೊಂದಿಗೆ ಜೋಡಣೆ ಮಾಡಲಾಗುತ್ತಿದೆ. ಈವರೆಗೆ ಜಿಲ್ಲೆಯಲ್ಲಿ ಶೇ. 92.55ರಷ್ಟು ಮ್ಯಾಪಿಂಗ್ ಕಾರ್ಯಪೂರ್ಣಗೊಂಡಿದ್ದು, ರಾಜ್ಯದಲ್ಲಿಯೇ ಗಮನಾರ್ಹ ಸಾಧನೆ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ 10,64,524 ಮತದಾರರಿದ್ದು, ಅವರಲ್ಲಿ ಉಡುಪಿಯಲ್ಲಿ ನೆಲೆಸಿರುವ ಸುಮಾರು 7,615 ಹೊರ ರಾಜ್ಯದ ಹಾಗೂ 48,226 ಹೊರ ಜಿಲ್ಲೆಯವರು ಸಹಿತ ಸುಮಾರು 70 ಸಾವಿರ ಮತದಾರರಿಗೆ ಸಂಬಂಧಿಸಿದ ಮ್ಯಾಪಿಂಗ್ ಆಗಬೇಕಿದೆ. ಎಲ್ಲ ಗ್ರಾ.ಪಂ. ಮಟ್ಟದಲ್ಲಿ ಸಹಾಯ ಕೇಂದ್ರ ಮತ್ತು ಜಿಲ್ಲಾಮಟ್ಟದ ಸಹಾಯವಾಣಿಯನ್ನು ಸ್ಥಾಪಿಸಲಾಗುವುದು ಎಂದರು.