ಪೊಲೀಸರ ಆರೋಗ್ಯಕ್ಕೆ ಹೆಚ್ಚಿನ ಒತ್ತು ಅಗತ್ಯ: ಎಸ್ಪಿ ಹರಿರಾಮ್ ಶಂಕರ್

ಉಡುಪಿ: ಪೊಲೀಸ್ ಕೆಲಸದಲ್ಲಿ ಖುಷಿ ಸಿಗುವಂತಾಗಲು ಸ್ಫೂರ್ತಿ ಮುಖ್ಯ. ಆರೋಗ್ಯ ಉತ್ತಮ ವಾಗಿದ್ದರಷ್ಟೇ ನೆಮ್ಮದಿಯಿಂದ ಕೆಲಸ ಮಾಡಲು ಸಾಧ್ಯ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್ ಹೇಳಿದ್ದಾರೆ.

ಉಡುಪಿ ಜಿಲ್ಲಾ ಪೊಲೀಸ್ ಹಾಗೂ ಪರೀಕ ಸೌಖ್ಯವನದ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಉಡುಪಿ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಮೆಮೋರಿಯಲ್ ಆಡಿಟೋರಿಯಂನಲ್ಲಿ ಆಯೋಜಿಸಲಾದ ನವಚೇತನ ಶಿಬಿರದ ಸಮಾರೋಪ ಸಮಾರಂಭ ದಲ್ಲಿ ಅವರು ಮಾತನಾಡಿದರು.

ಪೊಲೀಸ್ ಸಿಬಂದಿಗಳಿಗೆ ಕರ್ತವ್ಯದಲ್ಲಿ ಹಲವಾರು ರೀತಿಯ ಒತ್ತಡಗಳಿವೆ. ನಿದ್ದೆ, ಊಟದಲ್ಲಿ ಏರುಪೇರು ಗಳು ಆಗುವುದಿದೆ. ಒತ್ತಡ ಬಂದಾಗ ಬೊಜ್ಜು ಹಾಗೂ ಕಾಯಿಲೆಗಳು ಬರುವುದು ಸಹಜ. ಈ ಸಮಸ್ಯೆ ಗಳನ್ನು ನಾವೇ ಸರಿಪಡಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಚಲನಚಿತ್ರ ನಟ ಪ್ರಮೋದ್ ಶೆಟ್ಟಿ ಮಾತನಾಡಿ, ಬೇರೆಯವರ ಆರೋಗ್ಯ ಕಾಪಾಡುವ ಪೊಲೀಸರು ತಮ್ಮ ಆರೋಗ್ಯದ ಬಗ್ಗೆ ಗಮನ ಹರಿಸಬೇಕಾಗಿದೆ. ತೂಕ ಇಳಿಸಿ ಕೊಳ್ಳುವುದು ಕಷ್ಟದ ಕೆಲಸ ಅಲ್ಲ. ನಂಬಿಕೆ ನಮ್ಮ ಜೊತೆ ಇದ್ದರೆ ವ್ಯಾಯಾಮ, ಕ್ರೀಡೆಯ ಮೂಲಕ ತೂಕವನ್ನು ಇಳಿಸಬಹುದು. ಈ ರೀತಿಯ ಕಾರ್ಯಕ್ರಮ ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ನಡೆಯಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾಗಿ ಅಂತಾರಾಷ್ಟ್ರೀಯ ಕ್ರೀಡಾಪಟು ಅಭಿನ್ ದೇವಾಡಿಗ, ಧರ್ಮಸ್ಥಳದ ಎಸ್‌ಡಿಎಂ ಶಾಂತಿವನ ಟ್ರಸ್ಟ್ ಕಾರ್ಯದರ್ಶಿ ಬಿ.ಸೀತಾರಾಮ ತೋಳ್ಪಾಡಿತ್ತಾಯ, ಪರೀಕ ಸೌಖ್ಯವನದ ಮುಖ್ಯವೈದ್ಯಾಧಿಕಾರಿ ಡಾ. ಗೋಪಾಲ್ ಪೂಜಾರಿ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಧಾಕರ್ ಎಸ್.ನಾಯ್ಕ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶಿಬಿರದ ತರಬೇತುದಾರರಾದ ಏಂಜೆಲ್ಸ್ ಜುಂಬಾ ಫಿಟ್ನೆಸ್ನ ಪೂರ್ಣಿಮಾ ಪೆರ್ಗಣ್ಣ ,ಸಿಂಚನಾ ಪ್ರಕಾಶ್,ಜಿಮ್ ಟ್ರೈನರ್ ಉಮೇಶ್ ಮಟ್ಟು, xtreme ಡಾನ್ಸ್ ಮಂಜಿತ್ ಶೆಟ್ಟಿ, ಕರಾಟೆ ಶಿಹಾನ್ ಸಂತೋಷ್ ಶೆಟ್ಟಿ,ದೈಹಿಕ ತರಬೇತುದಾರರಾದ ನಾಗರಾಜ್ ಪ್ರಭು ,ಕೃಷ್ಣಯ್ಯ ದೇವಾಡಿಗ ಇವರನ್ನು ಸನ್ಮಾನಿಸಲಾಯಿತು. ಶಿಬಿರಾರ್ಥಿಗಳಾದ ಜಯಲಕ್ಷ್ಮೀ, ಸಂದೀಪ್ ಕುಮಾರ್, ವಿನೋದ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಪೊಲೀಸ್ ಇಲಾಖೆಯ ಆಪ್ತ ಸಮಾಲೋಚಕ ರೋಹಿತ್ ಕುಮಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಿಎಆರ್ ಸಿಬ್ಬಂದಿ ಯೋಗೀಶ್ ಕಾರ್ಯಕ್ರಮ ನಿರೂಪಿಸಿದರು.