ಉಡುಪಿ: ಪೊಲೀಸರು ಸದಾಕಾಲ ತಮ್ಮ ವೃತ್ತಿಯಲ್ಲಿ ಸಂವಿಧಾನವನ್ನು ಎತ್ತಿ ಹಿಡಿಯುವುದರೊಂದಿಗೆ ಕಾನೂನು ಪಾಲನೆಗೆ ಮೊದಲ ಪ್ರಾಶಸ್ತ್ಯ ನೀಡಬೇಕು ಎಂದು ಪಶ್ಚಿಮ ವಲಯ ಪೊಲೀಸ್ ಮಹಾ ನಿರೀಕ್ಷಕರಾದ ಅಮಿತ್ ಸಿಂಗ್ ಹೇಳಿದರು.
ಅವರು ನಗರದ ಡಿಎ ಆರ್ ಮೈದಾನದಲ್ಲಿ ಉಡುಪಿ ಜಿಲ್ಲಾ ತಾತ್ಕಾಲಿಕ ಪೊಲೀಸ್ ತರಬೇತಿ ಶಾಲೆ ವತಿಯಿಂದ ಸಶಸ್ತ್ರ ಮೀಸಲು ಪೊಲೀಸ್ ಕಾನ್ ಸ್ಟೇಬಲ್ ಗಳ 14ನೇ ತಂಡದ ನಿರ್ಗಮನ ಪಥ ಸಂಚಲನದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಗೌರವ ರಕ್ಷೆ ಸ್ವೀಕರಿಸಿ ಮಾತನಾಡಿದರು.

ಪೊಲೀಸ್ ವೃತ್ತಿಯಲ್ಲಿ ಶ್ರದ್ಧೆ, ಜನರ ಜೊತೆಗೆ ಉತ್ತಮ ಸಂಪರ್ಕ ಜ್ಞಾನ ಗುಣಗಳನ್ನು ಹೊಂದಿರುವುದರ ಮೂಲಕ ಕರ್ತವ್ಯ ನಿರ್ವಹಿಸಬೇಕು. ಅತ್ಯಂತ ಒತ್ತಡದಲ್ಲಿ ಕೆಲಸ ಮಾಡುವಾಗ ವೃತ್ತಿಪರತೆ ಮತ್ತು ತಾಳ್ಮೆಯಿಂದ ವರ್ತಿಸಬೇಕಾಗುತ್ತದೆ. ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿರಲು ತಾಳ್ಮೆ ಮತ್ತು ಶಿಸ್ತನ್ನು ಅಳವಡಿಸಿಕೊಳ್ಳಬೇಕು ಎಂದರು.
ತರಬೇತಿ ಶಾಲೆಯ ಪ್ರಾಂಶುಪಾಲ ಸುಧಾಕರ ನಾಯ್ಕ್ ಮಾತನಾಡಿ ತರಬೇತಿ ಪಡೆದಿರುವ ಪ್ರಶಿಕ್ಷಣಾರ್ಥಿಗಳಲ್ಲಿ ಮಾಜಿ ಸೈನಿಕರು ಸೇರಿದಂತೆ ಉನ್ನತ ಪದವಿ ವಿದ್ಯಾಭ್ಯಾಸ ಹೊಂದಿದವರು ಕೂಡ ಸೇರಿದ್ದಾರೆ. ಹತ್ತು ತಿಂಗಳ ಅವಧಿಯಲ್ಲಿ ಕಾನೂನು, ಕಂಪ್ಯೂಟರ್, ಮಾನಸಿಕ ಸ್ವಾಸ್ಥ್ಯ ಹಾಗೂ ಇತರೆ ಪ್ರಚಲಿತ ವಿಷಯಗಳಲ್ಲಿ ಬೋಧನೆ, ದೈಹಿಕ ಶಿಕ್ಷಣ, ಯೋಗ ಕರಾಟೆ, ಕವಾಯತು ಹಾಗೂ ವಿವಿಧ ಶಸ್ತ್ರ ತರಬೇತಿಯನ್ನು ನೀಡಲಾಗಿದೆ ಎಂದರು.
ತರಬೇತಿ ಅವಧಿಯಲ್ಲಿ ಒಳಾಂಗಣ, ಹೊರಾಂಗಣ ಮತ್ತು ಫೈರಿಂಗ್ ವಿಭಾಗಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಪ್ರಶಿಕ್ಷಣಾರ್ಥಿಗಳಿಗೆ ಬಹುಮಾನ ಹಾಗೂ ಮೂರು ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಪ್ರದರ್ಶಿಸಿದ ಶಿವಪಪ್ ಚೆನ್ನಬಸಪ್ಪ ಇಟ್ನಾಳ್ ಅವರಿಗೆ ಸರ್ವಾಂಗೀಣ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹರಿರಾಮ್ ಶಂಕರ್ ಸ್ವಾಗತಿಸಿ , ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಸುಧಾಕರ ನಾಯ್ಕ ವಂದಿಸಿದರು.















