ಉಡುಪಿ: ಕರ್ತವ್ಯ ನಿರತ ಟ್ರಾಫಿಕ್ ಪೊಲೀಸ್ ಗೆ ಕಪಾಳಮೋಕ್ಷ ಮಾಡಿದ ಕಿಡಿಕೇಡಿ

ಉಡುಪಿ: ವಾಹನ ತಪಾಸಣೆ ಮಾಡುತ್ತಿದ್ದ ವೇಳೆ ಕರ್ತವ್ಯ ನಿರತ ಸಂಚಾರ ಪೊಲೀಸ್ ಠಾಣೆಯ ಎಎಸ್‌ಐ ಚಂದ್ರಶೇಖರ ಅವರಿಗೆ ವ್ಯಕ್ತಿಯೊಬ್ಬ ಕಪಾಳಮೋಕ್ಷ ನಡೆಸಿದ ಘಟನೆ ಉಡುಪಿಯ ಕರಾವಳಿ ಬೈಪಾಸ್ ಬಳಿ ನಡೆದಿದೆ.

ಹಲ್ಲೆ ನಡೆಸಿದ ಆರೋಪಿಯನ್ನು ಬಾಗಲಕೋಟೆ ಮೂಲದ ಶಿವಕುಮಾರ್ ಆಸಂಗಿ (21) ಎಂದು ಗುರುತಿಸಲಾಗಿದೆ. ಚಂದ್ರಶೇಖರ್ ಅವರು ಎ.16ರಂದು ಕರಾವಳಿ ಬೈಸ್ ಬಳಿ ಸಿಬ್ಬಂದಿಯೊಂದಿಗೆ ವಾಹನ ತಪಾಸಣೆ ಮಾಡುತ್ತಿದ್ದರು. ಸಂಜೆ ಸುಮಾರು 6.15ರ ಸುಮಾರಿಗೆ ಅಲ್ಲಿಗೆ ಬಂದ ಆರೋಪಿ ಶಿವಕುಮಾರ್ ‘ ಏ ಪೊಲೀಸರೇ ನಿಮಗೆ ವಾಹನ ತಪಾಸಣೆ ಮಾಡಲು ಏನು ಅಧಿಕಾರ ಇದೆ?’ ಎಂದು ಹೇಳಿ, ಚಂದ್ರಶೇಖರ್ ಅವರ ಕೆನ್ನೆಗೆ ಬಾರಿಸಿದ್ದಾನೆ.

ಅಲ್ಲದೆ, ಚಂದ್ರಶೇಖರ್ ಅವರ ಕನ್ನಡಕ ಒಡೆದುಹಾಕಿದ್ದು, ರಕ್ಷಣೆ ಮಾಡಲು ಬಂದ ಸಾರ್ವಜನಿಕರಿಗೂ ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾನೆ. ಈತನ ಬಳಿ ಯಾವುದೇ ವಾಹನ ಇರಲಿಲ್ಲ. ಆದರೆ ಈತ ಯಾತಾಕ್ಕಾಗಿ ಹಲ್ಲೆ ನಡೆಸಿದ್ದಾನೆ ಎಂದು ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.