ಉಡುಪಿ: ಎಂಡಿಎಂಎ, ಹೈಡ್ರೋಗಾಂಜಾ ಮಾರಾಟ ಜಾಲ ಭೇದಿಸಿದ ಪೊಲೀಸರು

ಉಡುಪಿ: ಎಂಡಿಎಂಎ ಪೌಡರ್‌, ಹೈಡ್ರೋಗಾಂಜಾ ಹಾಗೂ ಎಂಡಿಎಂಎ ಟ್ಯಾಬ್ಲೆಟ್‌ಗಳನ್ನು ಹೊಂದಿದ್ದು, ಉಡುಪಿ, ಕಾಪು, ಮಣಿಪಾಲ ಮತ್ತು ಕಾರ್ಕಳ ಭಾಗಗಳಲ್ಲಿ ಮಾರಾಟ ಮಾಡುತ್ತಿದ್ದ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿ, ₹3.31 ಲಕ್ಷ ಮೌಲ್ಯದ ಮಾದಕ ವಸ್ತು ಹಾಗೂ ಇತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತರು ಉದ್ಯಾವರದ ಪಿತ್ರೋಡಿ ನಿವಾಸಿ ವಿಜಯ ಪೂಜಾರಿ (36), ಕುಕ್ಕಂದೂರು ಹಾರ್ಜಿಡ್ಡು ನಿವಾಸಿ ಪಿ.ಎ. ಮೊಹಮ್ಮದ್ ಸಮ್ಮಾಸ್ (24) ಹಾಗೂ ಕಾರ್ಕಳ ತಾಲ್ಲೂಕಿನ ಮಿಯಾರು ಗ್ರಾಮದ ಕುಂಟಿಬೈಲು ನಿವಾಸಿ ಆಕಾಶ್ ಶೆಟ್ಟಿ (20) ಎಂದು ಗುರುತಿಸಲಾಗಿದೆ.

ಉಡುಪಿ ತಾಲೂಕಿನ ಶಿವಳ್ಳಿ ಗ್ರಾಮದ ಬುಡ್ನಾರ್‌ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಹೊಂದಿದ್ದ ಆರೋಪಿಗಳನ್ನು ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬೆಳ್ಳಿಯಪ್ಪ ಕೆ.ಯು. ಅವರ ಮಾರ್ಗದರ್ಶನದಲ್ಲಿ ಮಲ್ಪೆ ಪೊಲೀಸ್ ನಿರೀಕ್ಷಕ ರಾಮಚಂದ್ರ ನಾಯಕ್ ನೇತೃತ್ವದ ವಿಶೇಷ ತಂಡ ಬಂಧಿಸಿದೆ.

ಆರೋಪಿಗಳಿಂದ 4 ಗ್ರಾಂ ಎಂಡಿಎಂಎ ಪೌಡರ್‌, 2.5 ಗ್ರಾಂ ಹೈಡ್ರೋಗಾಂಜಾ, 3.65 ಗ್ರಾಂ ಎಂಡಿಎಂಎ ಟ್ಯಾಬ್ಲೆಟ್‌, 3 ಗ್ರಾಂ ಗಾಂಜಾ, ಸಾಗಾಟಕ್ಕೆ ಬಳಸಿದ್ದ ಕಾರು ಸೇರಿದಂತೆ ಒಟ್ಟು ₹3,31,500 ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 95/2026ರಡಿ ಎನ್‌ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಕಾರ್ಯಾಚರಣೆಯಲ್ಲಿ ಉಡುಪಿ ಸಂಚಾರ ಠಾಣೆಯ ಪಿಎಸ್‌ಐ ಮಹೇಶ್ ಟಿ.ಎಂ., ಸೈಬರ್ ಅಪರಾಧ ಪೊಲೀಸ್ ಠಾಣೆಯ ಪ್ರವೀಣ್ ಕುಮಾರ್‌, ಹಿರಿಯಡ್ಕ ಠಾಣೆಯ ಪ್ರವೀಣ್ ಶೆಟ್ಟಿಗಾರ್‌, ಮಲ್ಪೆ ವೃತ್ತ ಕಚೇರಿಯ ಇಂದ್ರೇಶ್‌, ಹನುಮಂತ ಅಸ್ಕಿ, ಮನು ಕುಮಾರ್‌, ರಶ್ಮೀ ಹೆಗಡೆ, ರವಿ ಕುಮಾರ್‌, ಉಡುಪಿ ಸಂಚಾರ ಠಾಣೆಯ ಶ್ರೀನಿವಾಸ, ಸಂತೋಷ ಹಾಗೂ ದಿನೇಶ್‌ ಸೇರಿದಂತೆ ವಿಶೇಷ ತಂಡ ಭಾಗವಹಿಸಿತು.