ಕೃಷಿ ಭೂಮಿಯಲ್ಲಿ ಮನೆ ಕಟ್ಟೋ ಪ್ಲಾನ್ ನಿಮಗಿದ್ಯಾ? ಹಾಗಾದ್ರೆ ಈ ನಿಯಮ ನಿಮಗೆ ತಿಳಿದಿರ್ಲೇಬೇಕು

ಕೃಷಿ ಭೂಮಿ ಎಂದರೇನು?

ಕೃಷಿ ಭೂಮಿ ಎಂದರೆ ಬೆಳೆ ಬೆಳೆಸಲು, ಹಣ್ಣು-ತರಕಾರಿಗಳು ಬೆಳೆಯಲು, ಹೈನುಗಾರಿಕೆ ಅಥವಾ ಕೋಳಿ ಸಾಕಣೆ ಮುಂತಾದ ಕೃಷಿ ಚಟುವಟಿಕೆಗಳಿಗೆ ಮೀಸಲಾಗಿರುವ ಭೂಮಿ. ಸರ್ಕಾರದ ದಾಖಲೆಗಳಲ್ಲಿ ಈ ಭೂಮಿಯ ಬಳಕೆ ಕೃಷಿಗೆ ಮಾತ್ರ ಎಂದು ಸ್ಪಷ್ಟವಾಗಿರುತ್ತದೆ.

ನೇರವಾಗಿ ಮನೆ ಕಟ್ಟಬಹುದೇ?

ಸಾಮಾನ್ಯವಾಗಿ ಕೃಷಿ ಭೂಮಿಯಲ್ಲಿ ನೇರವಾಗಿ ಮನೆ ಕಟ್ಟಲು ಅವಕಾಶವಿಲ್ಲ. ಮನೆ ಕಟ್ಟುವ ಮೊದಲು ಭೂಮಿಯ ಬಳಕೆಯನ್ನು ಕೃಷಿಯಿಂದ ವಸತಿಗೆ (Land Conversion) ಪರಿವರ್ತಿಸಬೇಕು.

ಲ್ಯಾಂಡ್ ಕನ್ವರ್ಷನ್ ಏಕೆ ಮುಖ್ಯ?

ಕೃಷಿ ಭೂಮಿ ಕೃಷಿ ಬಳಕೆಗೆ ಮಾತ್ರ ಮೀಸಲಾಗಿರುವ ಜಾಗ. ಆ ಜಾಗದಲ್ಲಿ ವಸತಿಗೋಸ್ಕರ ಮನೆ ಕಟ್ಟುವುದು ಕಾನೂನು ಬದ್ಧವಲ್ಲ. ಹಾಗಾಗಿ ಈ ವಿಷಯ ಗಮನಕ್ಕೆ ಬಂದರೆ, ಸಂಬಂಧಪಟ್ಟ ಅಧಿಕಾರಿಗಳು ಮನೆ ಕೆಡವಲು ನೋಟಿಸ್ ನೀಡಬಹುದು, ದಂಡ ವಿಧಿಸುವ ಸಾಧ್ಯತೆ ಇದೆ. ಮನೆ ಕಾನೂನಾತ್ಮಕವಲ್ಲದಿದ್ದರಿಂದ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆಯಲು ಕಷ್ಟವಾಗುತ್ತದೆ. ಮನೆ ಕಟ್ಟಲು ಅಥವಾ ಮನೆ ಅಡ ಇಟ್ಟುಕೊಂಡು ಯಾವುದೇ ಬ್ಯಾಂಕ್‌ಗಳು ಸಾಲ ನೀಡುವುದಿಲ್ಲ.  

ಮನೆ ಕಟ್ಟಲು ಅನುಸರಿಸಬೇಕಾದ ಹಂತಗಳು

  1. ಭೂ ಪರಿವರ್ತನೆಗೆ ಅರ್ಜಿ ಸಲ್ಲಿಸಬೇಕು
  2. ಅಗತ್ಯ ಶುಲ್ಕ ಪಾವತಿಸಬೇಕು
  3. ಭೂಮಿಯನ್ನು ಪ್ಲಾಟ್‌ಗಳಾಗಿ ವಿಭಜಿಸಿದರೆ ಲೇಔಟ್ ಅನುಮೋದನೆ ಪಡೆಯಬೇಕು
  4. ಕಟ್ಟಡ ಯೋಜನೆಯನ್ನು ಪಂಚಾಯತ್/ಪುರಸಭೆಗೆ ಸಲ್ಲಿಸಬೇಕು
  5. ಎನ್ಒಸಿ (NOC) ಪಡೆಯಬೇಕು

ಅಗತ್ಯ ದಾಖಲೆಗಳು

  • ಮಾಲೀಕರ ಗುರುತಿನ ಚೀಟಿ
  • ಭೂಮಿಯ ಮಾಲೀಕತ್ವದ ದಾಖಲೆಗಳು
  • ಸರ್ವೆ ನಕ್ಷೆ
  • ಭೂ ಕಂದಾಯ ರಸೀದಿ
  • ಬೆಳೆ/ಭೂ ಬಳಕೆ ವಿವರಗಳು
  • ಯಾವುದೇ ಬಾಕಿ ಅಥವಾ ಪ್ರಕರಣಗಳಿಲ್ಲ ಎಂಬ ದಾಖಲೆ

ಭಾಗಶಃ ನಿರ್ಮಾಣ ಸಾಧ್ಯವೇ?

ಕೆಲವು ಸಂದರ್ಭಗಳಲ್ಲಿ ರೈತರು ತಮ್ಮ ಜಮೀನಿನ ಒಂದು ಸಣ್ಣ ಭಾಗದಲ್ಲಿ ಮನೆ ಕಟ್ಟಬಹುದು. ಆದರೆ ಇದಕ್ಕೂ ಮುನ್ನ ಭೂ ಪರಿವರ್ತನೆ ಕಡ್ಡಾಯ. ಸಂಪೂರ್ಣ ಕೃಷಿ ಭೂಮಿಯನ್ನು ವಸತಿಯಾಗಿ ಬಳಸಲು ಅನುಮತಿ ಇಲ್ಲ.

 ಗಮನಿಸಬೇಕಾದ ವಿಷಯಗಳು

  • ಕಡಿಮೆ ಬೆಲೆಗೆ ಸಿಗುವ ಭೂಮಿ ಬಗ್ಗೆ ಎಚ್ಚರಿಕೆಯಿಂದಿರಿ
  • ಅದು ಕೃಷಿ ಭೂಮಿಯೇ ಅಥವಾ ವಸತಿ ಭೂಮಿಯೇ ಎಂದು ಪರಿಶೀಲಿಸಿ
  • ಎಲ್ಲಾ ಕಾನೂನು ಅನುಮತಿಗಳನ್ನು ಪಡೆದು ನಂತರವೇ ನಿರ್ಮಾಣ ಪ್ರಾರಂಭಿಸಿ
  • ಸ್ಥಳೀಯ ಕಾನೂನು ತಜ್ಞರ ಸಲಹೆ ಪಡೆಯುವುದು ಉತ್ತಮ
  • ಎಲ್ಲಾ ದಾಖಲೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ

ಕೃಷಿ ಭೂಮಿಯಲ್ಲಿ ಮನೆ ಕಟ್ಟುವುದು ಸಾಧ್ಯ, ಆದರೆ ಸರಿಯಾದ ಕಾನೂನು ಕ್ರಮಗಳನ್ನು ಪಾಲಿಸಿದ ನಂತರ ಮಾತ್ರ ಸಾಧ್ಯ. ಮೊದಲಿಗೆ ಸರಳವಾಗಿ ಕಾಣುವ ಶಾರ್ಟ್‌ಕಟ್‌ಗಳು ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆಯಾಗಬಹುದು. ಆದ್ದರಿಂದ ಕಾನೂನು ಪ್ರಕಾರ ನಡೆದುಕೊಳ್ಳುವುದು ಉತ್ತಮ.