ಉಡುಪಿ: ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಶ್ರೀಗಳ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಆಗಿದೆ. ಈಗ ಶ್ರೀಗಳು ಕಣ್ಣು ಬಿಡುತ್ತಿದ್ದು, ಸಹಜ ಉಸಿರಾಟಕ್ಕೆ ಪ್ರಯತ್ನ ಮಾಡುತ್ತಿದ್ದಾರೆಂದು ಶ್ರೀಗಳಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರು ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಶನಿವಾರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೇಜಾವರ ಶ್ರೀಗಳನ್ನು ಭೇಟಿ ಮಾಡಿ ಮಾಧ್ಯಮಗಳ ಜತೆಗೆ ಮಾತನಾಡಿದರು.
ಪೇಜಾವರ ಶ್ರೀಪಾದರು ಶೀಘ್ರ ಗುಣಮುಖರಾಗಿ, ಮತ್ತೆ ಅವರು ಕೃಷ್ಣ ಮಠಕ್ಕೆ ಬಂದು ಕೃಷ್ಣನ ಸೇವೆ ಮಾಡುವಂತಾಗಬೇಕು. ಅದನ್ನು ನೋಡುವ ಸೌಭಾಗ್ಯ ನಮಗೆ ಸಿಗಬೇಕೆಂದು ಭಗವಂತನಲ್ಲಿ ಪ್ರಾರ್ಥನೆ ಮಾಡುತ್ತೇನೆ ಎಂದರು.
ಶ್ರೀಗಳಿಗೆ 90 ವರ್ಷ ಆಗಿದೆ. ಮಣಿಪಾಲ ಕೆಎಂಸಿಯ ತಜ್ಞ ವೈದ್ಯರ ತಂಡ ಶ್ರೀಗಳ ಆರೋಗ್ಯ ಸುಧಾರಣೆಗೆ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಶ್ರೀಗಳ ಆರೋಗ್ಯದಲ್ಲಿ ನಿನ್ನೆಗಿಂತ ಇಂದು ಸುಧಾರಣೆ ಆಗಿದೆ. ಕಣ್ಣು ಬಿಡುತ್ತಿದ್ದಾರೆ. ಮಾಧ್ಯಮದವರು ತಪ್ಪು ತಿಳಿಯುವ ಅಗತ್ಯವಿಲ್ಲ. ಶ್ರೀಗಳ ಆರೋಗ್ಯದ ದೃಷ್ಟಿಯಿಂದ ಭದ್ರತೆಯನ್ನು ಬೀಗಿ ಮಾಡಲಾಗಿದೆ ಎಂದು ಹೇಳಿದರು.
ಹೆಚ್ಚು ಕಟ್ಟೆಚ್ಚರ ವಹಿಸಲಾಗಿದೆ. ಇದಕ್ಕೆ ಮಾಧ್ಯಮದವರು ಸಹಕರಿಸಬೇಕು. ಶ್ರೀಗಳ ಅಭಿಮಾನಿಗಳು, ಭಕ್ತರಲ್ಲಿ ವಿನಂತಿ ಮಾಡುತ್ತೇನೆ. ಆಸ್ಪತ್ರೆಗೆ ಭೇಟಿ ನೀಡುವುದು ಬೇಡ, ಅವರು ಗುಣಮುಖರಾಗಿ ಕೃಷ್ಣಮಠಕ್ಕೆ ಬಂದ ನಂತರ ಅವರ ದರ್ಶನ ಪಡೆಯಬಹುದು ಎಂದರು.
ಪ್ರಧಾನಿ ಮೋದಿ, ಗೃಹ ಮಂತ್ರಿ ಅಮಿತ್ ಅವರು ಕೂಡ ದೂರವಾಣಿ ಮೂಲಕ ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ. ಪೇಜಾವರ ಶ್ರೀಗಳ ಆಪೇಕ್ಷೆಯಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಆಗುತ್ತಿದೆ. ಅದಕ್ಕೆ ಶ್ರೀಗಳ ಆಶೀರ್ವಾದ ಸಿಗಬೇಕೆಂಬುವುದೇ ಎಲ್ಲರ ಆಶಯವಾಗಿದೆ. ನಾನು ಕಂಡ ಅಪರೂಪದವಾದ ಸನ್ಯಾನಿ. ಇತ್ತೀಚೆಗೆ ಶ್ರೀಗಳನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆಶೀರ್ವಾದ ಪಡೆದಿದ್ದಾನೆ ಎಂದು ತಿಳಿಸಿದರು.












