ಉಡುಪಿ: ಅದಮಾರು ಮಠ ಪರ್ಯಾಯದ ಮೊದಲ ಅನ್ನಪ್ರಸಾದ ವಿತರಣೆ ಕಾರ್ಯ ಶನಿವಾರ ಮಹಾಪೂಜೆಯ ಬಳಿಕ ನೆರವೇರಿತು. ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರು ವಿಶೇಷ ಹಾಲುಪಾಯಸದ ಸವಿಯನ್ನುಂಡರು.
ರಾಜಾಂಗಣ ಸಮೀಪದ ಬೈಲಕೆರೆಯ ವಿಶಾಲ ಜಾಗದಲ್ಲಿ ಹಾಕಿದ್ದ ಚಪ್ಪರದಲ್ಲಿ 20ರಿಂದ 25 ಸಾವಿರ ಮಂದಿಗೆ ಭೋಜನ ವಿತರಿಸಲಾಯಿತು. ಬಹುತೇಕರು ಬಫೆ ಪದ್ಧತಿಯಲ್ಲಿ ಊಟ ಮಾಡಿದರೆ, ಇನ್ನು ಕೆಲವರು ನೆಲಕ್ಕೆ ಹಾಕಿದ್ದ ಹಾಸಿನಲ್ಲಿ ಕುಳಿತುಕೊಂಡು ವಿಶೇಷ ಭೋಜನದ ರುಚಿಯನ್ನು ಸವಿದರು. ಪರ್ಯಾಯ ಉತ್ಸವ ಹಾಗೂ ದರ್ಬಾರ್ ಅನ್ನು ಕಣ್ತುಂಬಿಕೊಳ್ಳಲು ಆಗಮಿಸಿದ್ದ ಜನರಿಗೆ ಬೈಲಕೆರೆಯ ಚಪ್ಪರ, ಕೃಷ್ಣಮಠದ ಅನ್ನಬ್ರಹ್ಮ, ಚೌಕಿ ಸಹಿತ 9 ಕಡೆಗಳಲ್ಲಿ ಹಾಲುಪಾಯಸ ಪ್ರಸಾದವನ್ನು ವಿತರಿಸಲಾಯಿತು. ಒಟ್ಟು 50ರಿಂದ 60 ಸಾವಿರ ಮಂದಿ ಭಕ್ತರು ಪರ್ಯಾಯದ ಪ್ರಸಾದವನ್ನು ಸ್ವೀಕರಿಸಿದರು. ಪರ್ಯಾಯ ಸಂಪ್ರದಾಯಂತೆ ಭಕ್ತರಿಗೆ ವಿತರಿಸಲು ವಿಶೇಷ ಹಾಲುಪಾಯಸವನ್ನು
ತಯಾರಿಸಲಾಗಿತ್ತು. ಅದರ ಜತೆಗೆ ಗೋಧಿ ಕಡಿ ಸ್ವೀಟ್, ಗೋಧಿಕಡಿಯ ಪಾಯಸ, ಲಾಡು, ಸಜ್ಜಿಗೆ ವಡೆ, ಅನ್ನ ಸಾರು, ಸಂಬಾರು, ಸುವರ್ಣಗಡ್ಡೆ, ಆಲಸಂಡೆ ಪಲ್ಯ ಹಾಗೂ
ಮಟ್ಟುಗುಳ್ಳದ ಹುಳಿಯನ್ನು ಭಕ್ತರಿಗೆ ಉಣಬಡಿಸಲಾಯಿತು.
70ಕ್ಕೂ ಹೆಚ್ಚಿನ ಬಾಣಸಿಗರು ತಯಾರಿಸಿದ ವಿಶೇಷ ಹಾಲುಪಾಯಸ, ಭೋಜನವನ್ನು 400ಕ್ಕೂ ಹೆಚ್ಚಿನ ಸ್ವಯಂ ಸೇವಕರು ಭಕ್ತರಿಗೆ ಬಡಿಸಿದರು. ಉಡುಪಿ, ಪಡುಬಿದ್ರಿ, ಕಟೀಲು ಮೊದಲಾದ ಸ್ಥಳಗಳಿಂದ ಸ್ವಯಂಸೇವಕರು ಆಗಮಿಸಿದ್ದದರು. ಬೆಳಿಗ್ಗೆ 10.30ಕ್ಕೆ ಶುರುವಾದ ವಿಶೇಷ ಅನ್ನಪ್ರಸಾದದ ವಿತರಣೆ ಕಾರ್ಯ ಮಧ್ಯಾಹ್ನದವರೆಗೆ ನಡೆಯಿತು.












