ಉಡುಪಿ: ಅದಮಾರು ಪರ್ಯಾಯ ಉತ್ಸವದ ಮೆರವಣಿಗೆ ಮುಕ್ತಾಯಗೊಳ್ಳುತ್ತಿದ್ದಂತೆ ನಗರಸಭೆಯ ಪೌರಕಾರ್ಮಿಕರು ಹಾಗೂ ಸ್ವಯಂ ಸೇವಕರು ಮೆರವಣಿಗೆ ಸಾಗಿಬಂದ ರಸ್ತೆಗಳನ್ನು ಸ್ವಚ್ಛಗೊಳಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಯಿತು.
ಅದಮಾರು ಮಠದ ಈಶಪ್ರಿಯ ಶ್ರೀಗಳು ಈಗಾಗಲೇ ಮುಂದಿನ ಎರಡು ವರ್ಷಗಳ ಪರ್ಯಾಯ ಅವಧಿಯಲ್ಲಿ ಪರಿಸರ ಸಂರಕ್ಷಣೆ ಹಾಗೂ ಸ್ವಚ್ಛತೆಗೆ ವಿಶೇಷ ಆದ್ಯತೆ ನೀಡಿದ್ದಾರೆ. ಅದರಂತೆ ಪುರಪ್ರವೇಶ, ಹೊರೆಕಾಣಿಕೆ ಹಾಗೂ ಪರ್ಯಾಯ ಮೆರವಣಿಗೆಯಲ್ಲಿ ಪ್ಲಾಸ್ಟಿಕ್ ಬ್ಯಾನರ್ ಬದಲು ಬಟ್ಟೆ ಬ್ಯಾನರ್‌ಗಳನ್ನು ಉಪಯೋಗಿಸಲಾಗಿತ್ತು. ಹಾಗೆಯೇ ಬಾಳೆಗಿಡಗಳನ್ನು ಬೇರು ಸಮೇತ ಕಿತ್ತುತಂದು ಸ್ವಾಗತ ಕಮಾನುಗಳಲ್ಲಿ ಅಲಂಕಾರಗೊಳಿಸಿ ಬಳಿಕ ಅದನ್ನು ಮತ್ತೆ ನಡೆಲಾಗಿತ್ತು. ಹೀಗೆ ಅನೇಕ ಪರಿಸರಕ್ಕೆ ಪೂರಕವಾದ ಕ್ರಮಗಳನ್ನು ಕೈಗೊಳ್ಳಲಾಗಿತ್ತು.
ಆ ನಿಟ್ಟಿನಲ್ಲಿ ಶನಿವಾರ ನಸುಕಿನ ವೇಳೆ ನಡೆದ ರಸ್ತೆಗಳ ಸ್ಪಚ್ಛತಾ ಕಾರ್ಯಕ್ಕೂ ಹೆಚ್ಚು ಪ್ರಶಂಸೆ ವ್ಯಕ್ತವಾಗಿದೆ. ಇಂದು ಮುಂಜಾನೆ 2 ಗಂಟೆ ಸುಮಾರಿಗೆ ಆರಂಭಗೊಂಡ ಪರ್ಯಾಯ ಮೆರವಣಿಗೆ ಸಾಗುತ್ತಿದ್ದಂತೆ ಹಿಂದಿನಿಂದ ಪೌರಕಾರ್ಮಿಕರು ಸ್ವಚ್ಛತಾ ಪರಿಕರಗಳೊಂದಿಗೆ ಸಜ್ಜಾಗಿದ್ದರು. ಇವರಿಗೆ ಕೆಲ ಯುವಕರ ತಂಡ ಸಾಥ್ ನೀಡಿತು. ಮೆರವಣಿಗೆ ಸಾಗಿಬಂದ ಕಿನ್ನಿಮೂಲ್ಕಿ, ಜೋಡುಕಟ್ಟೆ, ಕೋರ್ಟ್ ರೋಡ್, ತೆಂಕಪೇಟೆ ರಸ್ತೆ, ರಥಬೀದಿ ಹಾಗೂ ಕೆಎಸ್‌ಆರ್‌ಟಿಸಿ, ಸಿಟಿ, ಸರ್ವಿಸ್ ಬಸ್ ನಿಲ್ದಾಣಗಳನ್ನು ಸ್ವಚ್ಛಗೊಳಿಸಿದರು.
80 ಪೌರಕಾರ್ಮಿಕರಿಂದ ಸ್ವಚ್ಛತೆ ನಗರಸಭೆಯಿಂದ ನೇಮಕ ಮಾಡಿದ್ದ ಸುಮಾರು 80 ಅಧಿಕ ಪೌರಕಾರ್ಮಿಕರು ಹಾಗೂ ಪಿಪಿಸಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳ ತಂಡ ಜೋಡುಕಟ್ಟೆಯಿಂದ ರಥಬೀದಿಯವರೆಗೆ ಸ್ವಚ್ಛತಾ ಕಾರ್ಯ ನಡೆಸಿದರು.
ಸಂಗ್ರಹಿಸಲ್ಪಟ್ಟ ಕಸವನ್ನು ಎರಡು ಟೆಂಪೋಗಳ ಮೂಲಕ ತ್ಯಾಜ್ಯ ಸಂಗ್ರಹಣ ಘಟಕಕ್ಕೆ ಕೊಂಡೊಯ್ಯಲಾಯಿತು. ಪೂರ್ಣಪ್ರಜ್ಞ ಪದವಿ ಪೂರ್ವ ಹಾಗೂ ಪದವಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು, ಗಾಂಧಿ ಆಸ್ಪತ್ರೆಯ ಸಿಬ್ಬಂದಿ ಕೃಷ್ಣಮಠದ ಆವರಣದ ಸಹಿತ ನಗರದ ವಿವಿಧ ಸ್ಥಳಗಳನ್ನು ಶುಚಿಗೊಳಿಸಿದರು. ಮೆರವಣಿಗೆಯಲ್ಲಿ ಸಾಗಿಬಂದ ಜಾನಪದ, ಕಲೆ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸ್ತಬ್ಧಚಿತ್ರದ ಜತೆಗೆ ಸ್ವಚ್ಛನಗರ ಪರಿಕಲ್ಪನೆಯ ಸ್ತಬ್ಧಚಿತ್ರ ನೆರೆದಿದ್ದ ಜನರ ಗಮನಸೆಳೆಯಿತು.
ಮೆರವಣಿಗೆ ಮುಕ್ತಾಯಗೊಂಡ ಕೂಡಲೇ ಪೌರಕಾರ್ಮಿಕರು, ಸ್ವಯಂಸೇವಕರ ತಂಡ ಸ್ವಚ್ಛತಾ ಕಾರ್ಯ ನಡೆಸಿರುವುದು ಶ್ಲಾಘನೀಯ. ಇದು ಇತರರಿಗೂ ಮಾದರಿಯಾದ ಕಾರ್ಯವಾಗಿದೆ. ಅದಮಾರು ಪರ್ಯಾಯ ಅವಧಿಯಲ್ಲೂ ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಿರುವುದು ಖುಷಿ ತಂದಿದೆ-ಸುಬ್ರಹ್ಮಣ್ಯ ಆಚಾರ್ಯ












