ಉಡುಪಿ: ಮಕ್ಕಳು ವಿದ್ಯಾರ್ಥಿ ಜೀವನದಲ್ಲಿ ಹೆಚ್ಚು ವಿದ್ಯಾಭ್ಯಾಸಕ್ಕೆ ಒತ್ತು ನೀಡಿ, ಶಿಕ್ಷಣವಂತರಾಗಿ ಉನ್ನತ ಹುದ್ದೆಗಳನ್ನು ಅಲಂಕರಿಸುವುದರೊಂದಿಗೆ ರಾಜ್ಯ ಹಾಗೂ ರಾಷ್ಟ್ರಕ್ಕೆ ಹೆಸರು ತರಬೇಕೆಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಕರೆ ನೀಡಿದರು.
ಅವರು ಶುಕ್ರವಾರ ಪರ್ಕಳ ಶೆಟ್ಟಿಬೆಟ್ಟು ಸರಕಾರಿ ಸಂಯುಕ್ತ ಪ್ರೌಢಶಾಲೆಯಲ್ಲಿ ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಉಡುಪಿ ಉವರ ಸಹಯೋಗದಲ್ಲಿ ಶಾಲೆಯ “ಸುಜ್ಞಾನ” ಸಭಾಂಗಣ ಉದ್ಘಾಟಿಸಿ, ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳಿಗೆ ಹಳೆ ವಿದ್ಯಾರ್ಥಿ ಸಂಘದ ವತಿಯಿಂದ ಕೊಡಮಾಡಲಾದ ಉಚಿತ ಟ್ರ್ಯಾಕ್ ಸೂಟ್ ವಿತರಿಸಿ ಮಾತನಾಡುತ್ತಿದ್ದರು.



ಪೋಷಕರಿಗೆ ಮಕ್ಕಳೇ ಆಸ್ತಿ. ಮಕ್ಕಳ ಉತ್ತಮ ಭವಿಷ್ಯದ ಬಗ್ಗೆ ಸದಾ ತಂದೆ-ತಾಯಿಯರು ಕನಸು ಕಾಣುತ್ತಾರೆ. ದೇಶದ ಭವಿಷ್ಯದ ಸಂಪತ್ತಾಗಿರುವ ಮಕ್ಕಳು ಉತ್ತಮ ಶಿಕ್ಷಣ ಹೊಂದುವುದರೊಂದಿಗೆ ತಮ್ಮ ಗುರು ಹಿರಿಯರಿಗೆ, ಪೋಷಕರಿಗೆ ಗೌರವ ತಂದುಕೊಡಬೇಕು ಎಂದರು.

ವಿದ್ಯಾರ್ಥಿಗಳು, ಪಾಲಕರು ಹಾಗೂ ಸಮಾಜದ ಜವಾಬ್ದಾರಿಯುತ ನಾಗರಿಕರು ಸಮಯಕ್ಕೆ ಹೆಚ್ಚಿನ ಮಹತ್ವ ನೀಡಬೇಕು. ಶಿಕ್ಷಣ ಪಡೆಯುವ ಸಮಯದಲ್ಲಿ ವಿದ್ಯಾರ್ಥಿಗಳು ಶೈಕ್ಷಣಿಕ ಚಟುವಟಿಕೆಗಳಿಗೆ ಮಾತ್ರ ಆದ್ಯತೆ ನೀಡಬೇಕು. ತಮ್ಮ ಸುತ್ತಮುತ್ತಲಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರುಗಳನ್ನು ಕಾಣಬಹುದಾಗಿದ್ದು, ಅವರ ಯಶೋಗಾಥೆಗಳನ್ನು ಬದುಕಿನಲ್ಲಿ ರೂಪಿಸಿಕೊಳ್ಳಬೇಕು ಎಂದರು.

ಉಡುಪಿ ಜಿಲ್ಲೆಯು ಶಿಕ್ಷಣ ಕಾಶೀ ಎಂದೇ ಹೆಸರುವಾಸಿಯಾಗಿದೆ. ಮಕ್ಕಳು ತಮ್ಮ ವಿದ್ಯಾರ್ಥಿ ಜೀವನದಿಂದಲೇ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಬೇಕು ಎಂಬ ಇಚ್ಛಾಶಕ್ತಿ ಹೊಂದಿರಬೇಕು. ಮಕ್ಕಳಲ್ಲಿ ಒಂದಲ್ಲಾ ಒಂದು ರೀತಿಯ ಪ್ರತಿಭೆಗಳು ಇರುತ್ತವೆ ಎಂದ ಅವರು, ಸುಜ್ಞಾನ ಅಂದರೆ ಒಳ್ಳೆಯ ಜ್ಞಾನ. ಅದು ಈ ವೇದಿಕೆಯ ಮೂಲಕ ಅದು ಅನಾವರಣಗೊಳ್ಳುವಂತಾಗಲಿ. ಪೋಷಕರ ಕನಸನ್ನು ನನಸು ಮಾಡುವಂತ ಗುರಿಯನ್ನು ಮಕ್ಕಳು ಇಟ್ಟುಕೊಂಡು ಅದನ್ನು ಈಡೇರಿಸುವಂತಾಗಲಿ. ಈ ಸಭಾಂಗಣವು ಸೃಜನಶೀಲತೆ, ನಾವೀನ್ಯತೆ ಮತ್ತು ಶೈಕ್ಷಣಿಕ ಶ್ರೇಷ್ಠತೆಯ ಕೇಂದ್ರವಾಗಲಿ ಎಂದು ಶುಭ ಹಾರೈಸಿದರು.



ಶಾಸಕ ಯಶ್ಪಾಲ್ ಎ ಸುವರ್ಣ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದರು.

ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುಕೇಶ್ ಕುಂದರ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ನಗರಾಭಿವೃಧ್ದಿ ಪ್ರಾಧಿಕಾರದ ಅಧ್ಯಕ್ಷ ದಿನಕರ ಹೇರೂರು, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಜಿಲ್ಲಾ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಉಡುಪಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್, ನಗರಸಭಾ ಸದಸ್ಯೆ ಅಶ್ವಿನಿ ಅರುಣ ಪೂಜಾರಿ, ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತೀಕ್ ಬಾಯಲ್, ಡಿಡಿಪಿಐ ಲೋಕೇಶ್, ಡಯಟ್ ಉಪನಿರ್ದೇಶಕ ಅಶೋಕ್ ಕಾಮತ್, ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಶಬಾನಾ ಅಂಜುಮ್, ಶಾಲೆಯ ಅಧ್ಯಾಪಕ ವೃಂದದವರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸದಸ್ಯರುಗಳು, ಪೋಷಕರುಗಳು, ವಿದ್ಯಾರ್ಥಿಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಶಾಲಾ ಮುಖ್ಯೋಪಾಧ್ಯಾಯ ರಾಮಕೃಷ್ಣ ನಾಯಕ್ ಸ್ವಾಗತಿಸಿ, ಪ್ರಶಾಂತ್ ಶೆಟ್ಟಿ ಹಾಗೂ ಅಮೃತ್ ರಾಜ್ ನಿರೂಪಿಸಿ, ರತ್ನಾ ಕೆ ವಂದಿಸಿದರು.

















