ಕುಂದಾಪುರ: ತುರ್ತು ಸಂದರ್ಭ ಹೊರತುಪಡಿಸಿ ಖಾಸಗಿ ವಾಹನಗಳನ್ನು ರಸ್ತೆಗಿಳಿಸಬೇಡಿ ಎಂಬ ಜಿಲ್ಲಾಡಳಿತದ ಖಡಕ್ ಸೂಚನೆಯನ್ನೂ ಲೆಕ್ಕಿಸದೆ ಮಂಗಳವಾರ ರಸ್ತೆಗಿಳಿದ ಖಾಸಗಿ ವಾಹನ ಮಾಲೀಕರಿಗೆ ಟ್ರಾಫಿಕ್ ಪೊಲೀಸರು ಖಡಕ್ ಎಚ್ಚರಿಕೆ ನೀಡಿ ಮನೆಗೆ ವಾಪಾಸ್ ಕಳುಹಿಸಿದ ಘಟನೆ ಮಂಗಳವಾರ ಬೆಳಿಗ್ಗೆ ಕುಂದಾಪುರದ ಶಾಸ್ತ್ರೀವೃತ್ತದಲ್ಲಿ ನಡೆದಿದೆ.
ಸಿಎಂ ಹೊರಡಿಸಿರುವ ಲಾಕ್ಡೌನ್ ಆದೇಶಕ್ಕೆ ತಾಲೂಕಿನ ಎಲ್ಲಾ ವರ್ತಕರು, ರಿಕ್ಷಾ ಚಾಲಕರು, ಹೊಟೇಲ್ ಮಾಲೀಕರು ಬೆಂಬಲ ಸೂಚಿಸಿ ವ್ಯಾಪಾರ ವಹಿವಾಟುಗಳನ್ನು ಸಂಪೂರ್ಣ ಸ್ಥಗಿತಗೊಳಿಸಿ ಮನೆಯಲ್ಲೇ ಉಳಿದುಕೊಂಡರೆ, ಬಹುತೇಕ ಖಾಸಗಿ ವಾಹನಗಳ ಹಾಗೂ ದ್ವಿಚಕ್ರ ಸವಾರರು ಮನಬಂದಂತೆ ರಸ್ತೆಯಲ್ಲಿ ಸುತ್ತಾಡುತ್ತಿರುವುದನ್ನು ಮನಗಂಡ ಪೊಲೀಸರು ನಗರದ ಶಾಸ್ತ್ರೀ ವೃತ್ತದಲ್ಲಿ ಎಲ್ಲಾ ವಾಹನಗಳನ್ನು ಅಡ್ಡಗಟ್ಟಿ ಸವಾರರಿಗೆ ಖಡಕ್ ಸೂಚನೆ ನೀಡಿದ್ದಾರೆ.
ಹೇಳುವುದು ನಿಮ್ಮ ಒಳಿತಿಗಾಗಿಯೇ. ಸುಖಾಸುಮ್ಮನೆ ರಸ್ತೆಯ ಮೇಲೆ ತಿರುಗಾಡಬೇಡಿ ಸಾವನ್ನು ಮೈಮೇಲೆ ಎಳೆದುಕೊಳ್ಳಬೇಡಿ. ತುರ್ತು ಸಂದರ್ಭಗಳಿಗೆ ಮಾತ್ರ ಅವಕಾಶ ಮಾಡಿಕೊಡುತ್ತೇವೆ. ಅದನ್ನು ಬಿಟ್ಟು ಯರ್ರಾಬಿರ್ರಿಯಾಗಿ ವಾಹನಗಳನ್ನು ರಸ್ತೆಗಿಳಿಸಿದರೆ ಸುಮ್ಮನಿರಲ್ಲ. ಎಲ್ಲರ ಮೇಲೂ ಕೇಸ್ ಜಡಿದು ಒಳಗೆ ಹಾಕುತ್ತೇವೆ ಹುಷಾರ್ ಎಂದು ಎಚ್ಚರಿಕೆ ನೀಡಿ ಮನೆಗೆ ವಾಪಾಸ್ ಕಳುಹಿಸಿದ್ದಾರೆ. ಮಾತ್ರವಲ್ಲದೇ ರಸ್ತೆಗಿಳಿದ ಎಲ್ಲಾ ವಾಹನಗಳ ದಾಖಲೆಗಳನ್ನು ನೋಟ್ ಮಾಡಿಕೊಂಡಿದ್ದಾರೆ. ಪೊಲೀಸರು ರಸ್ತೆಗಿಳಿದು ಕಾರ್ಯಾಚರಣೆ ನಡೆಸಿದ ಕೆಲ ಹೊತ್ತಲ್ಲೆ ವಾಹನಗಳ ಓಡಾಟ ಸ್ವಲ್ಪಮಟ್ಟಿಗೆ ಕಡಿಮೆಯಾಯಿತು.