ಡಿ.14-15: ನಿಟ್ಟೂರು ಪ್ರೌಢಶಾಲೆಯ ಸುವರ್ಣಪರ್ವ ಸಮಾರಂಭದ ಉದ್ಘಾಟನೆ- ವಾರ್ಷಿಕೋತ್ಸವ

ಉಡುಪಿ: ನಿಟ್ಟೂರು ಪ್ರೌಢಶಾಲೆಯ ಸುವರ್ಣಪರ್ವ ಸಮಾರಂಭದ ಉದ್ಘಾಟನೆ, ವಾರ್ಷಿಕೋತ್ಸವ ಹಾಗೂ ಹಳೆ ವಿದ್ಯಾರ್ಥಿಗಳ ಮತ್ತು ರಕ್ಷಕರ ಸಂಭ್ರಮ ಡಿ. 14 ಮತ್ತು 15ರಂದು ಶಾಲೆಯ‌ ಆವರಣದಲ್ಲಿ ನಡೆಯಲಿದೆ ಎಂದು ಶಾಲಾ ಮುಖ್ಯೋಪಾಧ್ಯಾಯರೂ ಆಗಿರುವ ಸುವರ್ಣಪರ್ವ ಸಮಿತಿ ಕಾರ್ಯದರ್ಶಿ ಮುರಲಿ ಕಡೆಕಾರ್‌ ಹೇಳಿದರು.
ನಿಟ್ಟೂರು ಪ್ರೌಢಾಶಾಲೆಯಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಡಿ. 14ರಂದು ರಕ್ಷಕರ ಸಂಭ್ರಮ ಹಾಗೂ ಶಾಲಾ ವಾರ್ಷಿಕೋತ್ಸವ ಜರುಗಲಿದೆ. ಅಂದು ಬೆಳಿಗ್ಗೆ 9ಗಂಟೆಗೆ ಧ್ವಜಾರೋಹಣ, 9.30ಕ್ಕೆ ರಕ್ಷಕರಿಗೆ ವಿವಿಧ ಮನೋರಂಜನ ಸ್ಪರ್ಧೆ ಹಾಗೂ 11 ಗಂಟೆಗೆ ಸಭಾಪರ್ವ ಕಾರ್ಯಕ್ರಮ ನಡೆಯಲಿದೆ. 11 ಗಂಟೆವರೆಗೆ ರಕ್ಷಕರಿಗೆ ವಿವಿಧ ಮನೋರಂಜನ ಸ್ಪರ್ಧೆ ನಡೆಯಲಿದೆ ಜರುಗಲಿದೆ. ತಲ್ಲೂರು ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದರು.
ಸಂಜೆ 5ಗಂಟೆಗೆ ‘ವೀರ ಅಭಿಮನ್ಯು’ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ರಾತ್ರಿ 7ಗಂಟೆಗೆ ವಾರ್ಷಿಕೋತ್ಸವ ಜರುಗಲಿದ್ದು, ಉದ್ಯಮಿ ಆನಂದ್‌ ಸಿ. ಕುಂದರ್‌ ಅಧ್ಯಕ್ಷತೆ ವಹಿಸುವರು.
8.30ಕ್ಕೆ ‘ಜೀಮೂತವಾಹನ’ ನಾಟಕ ಹಾಗೂ 9.30ಕ್ಕೆ ಶಾಲಾ ವಿದ್ಯಾರ್ಥಿಗಳು ನೃತ್ಯ ವೈವಿಧ್ಯ ಕಾರ್ಯಕ್ರಮವನ್ನು ಪ್ರಸ್ತುತಪಡಿಸುವರು ಎಂದರು.
ಡಿ. 15ರಂದು ಹಳೆವಿದ್ಯಾರ್ಥಿಗಳ ಸಂಭ್ರಮ ನೆರವೇರಲಿದೆ. ಬೆಳಿಗ್ಗೆ 9.30ಕ್ಕೆ ಹಳೆ ವಿದ್ಯಾರ್ಥಿಗಳಿಗೆ ವಿವಿಧ ಮನೋರಂಜನೆ ಸ್ಪರ್ಧೆ ನಡೆಯಲಿದೆ. ಬೆಳಿಗ್ಗೆ 11ಗಂಟೆಗೆ ಅಂಬಲಪಾಡಿ ದೇವಳದ ಧರ್ಮದರ್ಶಿ ಡಾ. ನಿ.ಬಿ. ವಿಜಯ ಬಲ್ಲಾಳ್‌ ಅಧ್ಯಕ್ಷತೆಯಲ್ಲಿ
ಸಭಾಪರ್ವ ಕಾರ್ಯಕ್ರಮ ಜರುಗಲಿದೆ. ಎಸ್ಸೆಸ್ಸೆಲ್ಸಿಯಲ್ಲಿ ಪ್ರಥಮ ಸ್ಥಾನ ಗಳಿಸಿರುವಂತಹ ಹಳೆ ವಿದ್ಯಾರ್ಥಿಗಳನ್ನು ಮೀನುಗಾರಿಕಾ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸನ್ಮಾನಿಸುವರು.  ಸಂಸದೆ ಶೋಭಾ ಕರಂದ್ಲಾಜೆ ಸುವರ್ಣಪತ್ರ ಬಿಡುಗಡೆಗೊಳಿಸುವರು. ರಾತ್ರಿ 8 ಗಂಟೆಯಿಂದ ಹಳೆ ವಿದ್ಯಾರ್ಥಿಗಳಿಂದ ಹಾಡು, ನೃತ್ಯ, ಕಿರು ನಾಟಕ‌ ಪ್ರದರ್ಶನಗೊಳ್ಳಲಿದೆ ಎಂದರು.
ಸುವರ್ಣಪರ್ವ ಸಮಿತಿಯ ಅಧ್ಯಕ್ಷ ಯೋಗೀಶ್ಚಂದ್ರಾಧರ, ಕೋಶಾಧಿಕಾರಿ ಪ್ರದೀಪ್‌ ಜೋಗಿ, ನಿಟ್ಟೂರು ಎಜುಕೇಶನಲ್‌ ಸೊಸೈಟಿ
ಕಾರ್ಯದರ್ಶಿ ಭಾಸ್ಕರ ಡಿ. ಸುವರ್ಣ, ನಿವೃತ್ತ ಶಿಕ್ಷಕ ಎಸ್‌.ವಿ. ಭಟ್‌, ಶಿಕ್ಷಕ ರಕ್ಷಕ ಸಂಘದ ಸುಮನ ಆಚಾರ್ಯ ಗೋಷ್ಠಿಯಲ್ಲಿ ಇದ್ದರು.
ಸುವರ್ಣಪರ್ವ ಉದ್ಘಾಟನೆ
ಡಿ. 15ರಂದು ಸಂಜೆ 5 ಗಂಟೆಗೆ ಜಿ. ಶಂಕರ್‌ ಫ್ಯಾಮಿಲಿ ಟ್ರಸ್ಟ್‌ನ ಪ್ರವರ್ತಕ ಜಿ. ಶಂಕರ್‌ ಸುವರ್ಣಪರ್ವ ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಕೆ. ರಘುಪತಿ ಭಟ್‌ ಅಧ್ಯಕ್ಷತೆ ವಹಿಸುವರು. ಇದೇ ವೇಳೆ ನವೀಕೃತ ಮುಖ್ಯೋಪಾಧ್ಯಾಯರ ಕೊಠಡಿ, ಶಿಕ್ಷಕರ ಕೊಠಡಿ, ಸೋಲಾರ್‌ ವ್ಯವಸ್ಥೆಯ ಉದ್ಘಾಟನೆ ನಡೆಯಲಿದೆ ಎಂದು ಮುರಲಿ ಕಡೆಕಾರ್‌ ಅವರು ತಿಳಿಸಿದರು.