ನಿಟ್ಟೂರು ಪ್ರೌಢಶಾಲೆಯಲ್ಲಿ ಹಳೆ ವಿದ್ಯಾರ್ಥಿ ಶಿಕ್ಷಕರಿಗೆ ಅಭಿನಂದನೆ

ಉಡುಪಿ: ಸುವರ್ಣ ಸಂಭ್ರಮದಲ್ಲಿರುವ ನಿಟ್ಟೂರು ಪ್ರೌಢಶಾಲೆಯಲ್ಲಿ ವಿದ್ಯಾರ್ಜನೆಗೈದು ವಿವಿಧ ಶೈಕ್ಷಣಿಕ ಸಂಸ್ಥೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸುಮಾರು 60ಕ್ಕೂ ಹೆಚ್ಚು ಹಳೆವಿದ್ಯಾರ್ಥಿ ಶಿಕ್ಷಕರನ್ನು ಶಾಲಾ ರಜತ ಸಭಾಭವನದಲ್ಲಿ ಶಾಲಾ
ಹಳೆವಿದ್ಯಾರ್ಥಿ ಸಂಘದ ವತಿಯಿಂದ ಅಭಿನಂದಿಸುವ ಹೃದಯಸ್ಪರ್ಶಿ ಕಾರ್ಯಕ್ರಮ ಜರಗಿತು. ಪೂರ್ಣಪ್ರಜ್ಞ ಕಾಲೇಜೀನ ನಿವೃತ್ತ ಉಪನ್ಯಾಸಕ ಡಾ| ಬಿ.ಎಂ. ಸೋಮಯಾಜಿ ಅಧ್ಯಕ್ಷತೆಯಲ್ಲಿ ಹಳೆವಿದ್ಯಾರ್ಥಿ ಶಿಕ್ಷಕರನ್ನು ಅಭಿನಂದಿಸಲಾಯಿತು.
ಶಿಕ್ಷಕರನ್ನು ಅಭಿನಂದಿಸಿದ ಡಾ| ಬಿ.ಎಂ. ಸೋಮಯಾಜಿ ಮಾತನಾಡಿ, ಶಿಕ್ಷಕ ವೃತ್ತಿ ಪವಿತ್ರವಾದದ್ದು, ಸದಾ ಕಲಿಯುವ
ತುಡಿತ ಮತ್ತು ವಿದ್ಯಾರ್ಥಿ ಪ್ರೀತಿ ಶಿಕ್ಷಕರಲ್ಲಿ ಇರಲೇ ಬೇಕಾದ ಮೌಲ್ಯವಾಗಿದೆ. ಶಾಲೆ ಮತ್ತು ಹಳೆವಿದ್ಯಾರ್ಥಿಗಳ ನಡುವೆ ಸಂಬಂಧ ಬೆಸೆಯುವ ಈ ಕಾರ್ಯಕ್ರಮ ಆದರ್ಶಪ್ರಾಯವಾಗಿದೆ. ಈ ನಿಟ್ಟಿನಲ್ಲಿ ಶಾಲಾ ಹಳೆವಿದ್ಯಾರ್ಥಿ ಸಂಘದ ಕಾರ್ಯಕ್ರಮ
ಶ್ಲಾಘನೀಯವಾದದ್ದು ಎಂದರು.
ಕಾರ್ಯಕ್ರಮದ ಕುರಿತು ಪ್ರಸ್ತಾವನೆಗೈದ ಶಾಲಾ ಮುಖ್ಯೋಪಾಧ್ಯಾಯ ಮುರಲಿ ಕಡೆಕಾರ್ ಸುವರ್ಣ ಸಂಭ್ರಮದಲ್ಲಿರುವ ಶಾಲೆಯಲ್ಲಿ ಹಲವು ಅರ್ಥಪೂರ್ಣ ಕಾರ್ಯಕ್ರಮಗಳನ್ನು ಸಾಕಾರಗೊಳಿಸುವ ಯೋಜನೆಯಿದೆ. ಈ ನಿಟ್ಟಿನಲ್ಲಿ ಹಳೆವಿದ್ಯಾರ್ಥಿ ಶಿಕ್ಷಕರನ್ನು ಅಭಿನಂದಿಸುವ ಕಾರ್ಯಕ್ರಮ ನಾಂದಿಯಾಗಿದೆ ಎಂದರು.
ಹಳೆವಿದ್ಯಾರ್ಥಿ ಶಿಕ್ಷಕರ ಪರವಾಗಿ ನೀರಧ ಶೆಟ್ಟಿ, ದಿವ್ಯಾ ಭಟ್, ಜಗದೀಶ ಆಚಾರ್ಯ, ಲಕ್ಷ್ಮೀ ಆಚಾರ್ಯ, ಪ್ರಕಾಶ್ ಜೋಗಿ, ವಾದಿರಾಜ್ ತಂತ್ರಿ, ನಜಿರಾಭಿ, ಗೀತಾ, ಪಲ್ಲವಿ ಶೇಟ್ ಶಾಲೆಯಲ್ಲಿ ಕಳೆದ ತಮ್ಮ ದಿನಗಳ ಕುರಿತು ಮನದಾಳದ ಭಾವನೆಗಳನ್ನು ಹಂಚಿಕೊಂಡರು.
ಶಾಲಾ ನಿವೃತ್ತ ಮುಖ್ಯೋಪಾಧ್ಯಾಯರಾದ ಕೆ.ಎ.ಪಿ. ಭಟ್, ವೇಣುಗೋಪಾಲ ಆಚಾರ್ಯ, ಎಸ್.ವಿ.ಭಟ್,  ಸುಬ್ರಹ್ಮಣ್ಯ ಭಟ್, ಭಾಸ್ಕರ ಡಿ. ಸುವರ್ಣ ಮತ್ತು ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷ ನಾಗಾನಂದ ವಾಸುದೇವ ಆಚಾರ್ಯ ಕಾರ್ಯಕ್ರಮದ ಕುರಿತು ಮಾತನಾಡಿದರು.
ಈ ಸಂದರ್ಭದಲ್ಲಿ ಶಾಲೆಯಲ್ಲಿ ಸುಮಾರು ೧೦ ವರ್ಷಗಳ‌ ಕಾಲ ಗೌರವ ಶಿಕ್ಷಕರಾಗಿ ಸೇವೆಸಲ್ಲಿಸಿದ ಮಂಜುನಾಥ ಇವರನ್ನು ಶಾಲಾ ವತಿಯಿಂದ‌ ಸಮ್ಮಾನಿಸಲಾಯಿತು.
ಹಳೆವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ್ ಸ್ವಾಗತಿಸಿ,  ಪ್ರದೀಪ್ ಜೋಗಿ ನಿರೂಪಿಸಿದರು. ಶಶಿಪ್ರಭಾ ಕಾರಂತ್ ವಂದಿಸಿದರು.