ಭಾರತದ ಅಥ್ಲೆಟಿಕ್ ಫೆಡರೇಷನ್, ಕರ್ನಾಟಕ ಅಥ್ಲೆಟಿಕ್ ಅಸೋಸಿಯೇಷನ್ ಹಾಗೂ ಉಡುಪಿ ಜಿಲ್ಲಾ ಅಮೆಚೂರು ಅಥ್ಲೆಟಿಕ್ ಅಸೋಸಿಯೇಷನ್ನ ಸಂಯುಕ್ತ ಆಶ್ರಯದಲ್ಲಿ 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಚಾಂಪಿಯನ್ಶಿಪ್ ಮಾ.10ರಿಂದ 12ರವರೆಗೆ ಉಡುಪಿ ಅಜ್ಜರಕಾಡಿನ ಮಹಾತ್ಮಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಕ್ರೀಡಾಕೂಟದ ಸಂಘಟನಾ ಸಮಿತಿಯ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಿಟ್ಟೆಯ ನಿಟ್ಟೆ ವಿದ್ಯಾಸಂಸ್ಥೆಯ ಪ್ರಾಯೋಜಕತ್ವದಲ್ಲಿ ಈ ಪ್ರತಿಷ್ಠಿತ ಕ್ರೀಡಾಕೂಟ ಮೂರು ದಿನಗಳ ಕಾಲ ನಡೆಯಲಿದೆ ಎಂದರು.
ಈ ಕ್ರೀಡಾಕೂಟದಲ್ಲಿ ದೇಶದ 28 ರಾಜ್ಯಗಳ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳಿಂದ 18 ವರ್ಷದೊಳಗಿನ ಒಟ್ಟು 1200 ಕ್ರೀಡಾಪಟುಗಳು ಭಾಗವಹಿಸಲಿದ್ದಾರೆ. ದೇಶದ ಅಥ್ಲೆಟಿಕ್ ಫೆಡರೇಷನ್ನಿಂದ 25 ತಾಂತ್ರಿಕ ಅಧಿಕಾರಿಗಳೊಂದಿಗೆ ಭಾಗವಹಿಸಲಿದ್ದಾರೆ. 120 ಮಂದಿ ಕ್ರೀಡಾಧಿಕಾರಿಗಳು ಹಾಗೂ 100 ಮಂದಿ ಸ್ವಯಂ ಸೇವಕರು ಸಹ ಕ್ರೀಡಾಕೂಟದ ವೇಳೆ ಕಾರ್ಯ ನಿರ್ವಹಿಸಲಿದ್ದಾರೆ ಎಂದರು.
ಕರ್ನಾಟಕ ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ನ ಕಾರ್ಯದರ್ಶಿ ಎ.ರಾಜವೇಲು ಅವರು ಮಾತನಾಡಿ, ಅಂತಾರಾಷ್ಟ್ರೀಯ ಅಥ್ಲೆಟಿಕ್ಸ್ನ ಹಾಗೂ ಅಥ್ಲೆಟಿಕ್ ಫೆಡರೇಷನ್ ಆಫ್ ಇಂಡಿಯಾದ ಇತ್ತೀಚಿನ ನಿಯಮಾವಳಿಗಳಂತೆ ಈ ಕ್ರೀಡಾಕೂಟ ನಡೆಯಲಿದ್ದು, ಇದರ ತಾಂತ್ರಿಕ ವಿಭಾಗದಲ್ಲಿ ಅತ್ಯಾಧುನಿಕ ಕ್ರೀಡಾಪರಿಕರಗಳನ್ನು ಬಳಸಲಾಗುವುದು. ಹೀಗಾಗಿ ಫೋಟೋ ಫಿನಿಶ್ ಕೆಮರಾ, ಇಲೆಕ್ಟ್ರಾನಿಕ್ಸ್ ಉಪಕರಣ ಸೇರಿದಂತೆ ಎಲ್ಲಾ ಆಧುನಿಕ ಉಪಕರಣ ಗಳನ್ನು ಇಲ್ಲಿ ಅಳವಡಿಸಲಾಗುತ್ತದೆ. ಬಾಲಕರ ಹಾಗೂ ಬಾಲಕಿಯರ ವಿಭಾಗದಲ್ಲಿ ತಲಾ 20 ಸ್ಪರ್ಧೆಗಳು ನಡೆಯಲಿವೆ ಎಂದರು.
ಅಥ್ಲೀಟ್ಗಳು ಇಲ್ಲಿ ತೋರುವ ಪ್ರದರ್ಶನದ ಆಧಾರದ ಮೇಲೆ ಮುಂದಿನ ಎ.25ರಿಂದ 30ರವರೆಗೆ ಉಜ್ಭೇಕಿಸ್ತಾನದಲ್ಲಿ ನಡೆಯುವ 5ನೇ ಏಷ್ಯನ್ ಯೂತ್ ಅಥ್ಲೆಟಿಕ್ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸುವ ಭಾರತೀಯ ಯುವ ಅಥ್ಲೆಟಿಕ್ ತಂಡದ ಆಯ್ಕೆ ನಡೆಯಲಿದೆ ಎಂದು ರಾಜವೇಲು ತಿಳಿಸಿದರು.
ಜಿಲ್ಲೆಯಿಂದ ತಂಡಕ್ಕೆ ಮೂವರು: 18ನೇ ರಾಷ್ಟ್ರೀಯ ಯುವ ಅಥ್ಲೆಟಿಕ್ ಟೂರ್ನಿಯ ಉದ್ಘಾಟನೆ ಮಾ.10ರಂದು ಸಂಜೆ 5ಗಂಟೆಗೆ ನಡೆಯಲಿದೆ. ಇದಕ್ಕಾಗಿ ಅಜ್ಜರಕಾಡು ಕ್ರೀಡಾಂಗಣದಲ್ಲಿ ಎಲ್ಲಾ ಸಿದ್ಧತೆಗಳು ಜಿಲ್ಲಾ ಯುವ ಜನಸೇವಾ ಮತ್ತು ಕ್ರೀಡಾ ಇಲಾಖೆಯ ನೇತೃತ್ವದಲ್ಲಿ ನಡೆಯುತ್ತಿದೆ.
ಈ ಕ್ರೀಡಾಕೂಟದಲ್ಲಿ ಭಾಗವಹಿಸುವ 31 ಕ್ರೀಡಾಪಟುಗಳ ಅತಿಥೇಯ ಕರ್ನಾಟಕ ತಂಡವನ್ನು ಹೆಸರಿಸಲಾಗಿದೆ. ತಂಡದಲ್ಲಿ ಉಡುಪಿ ಜಿಲ್ಲೆಯ ಮೂವರು ಉದಯೋನ್ಮುಖ ಕ್ರೀಡಾಪಟುಗಳು ಸ್ಥಾನ ಪಡೆದಿದ್ದಾರೆ ಎಂದು ರಘುಪತಿ ಭಟ್ ತಿಳಿಸಿದರು.
ಉಡುಪಿಯಲ್ಲಿ ಮೊದಲ ಬಾರಿಗೆ ನಡೆಯುವ ರಾಷ್ಟ್ರೀಯ ಮಟ್ಟದ ಅಥ್ಲೆಟಿಕ್ ಕೂಟದಲ್ಲಿ ಜಿಲ್ಲೆಯ ಧ್ರುವ ಬಲ್ಲಾಳ್ ಅವರು 200ಮೀ. ಹಾಗೂ 400ಮೀ. ಸ್ಪರ್ಧೆಗಳಲ್ಲಿ ಪಾಲ್ಗೊಂಡರೆ, ಮಾಧುರ್ಯ ಡಿಸ್ಕಸ್ ತ್ರೋ ಸ್ಪರ್ಧೆಯಲ್ಲಿ ಸ್ಪರ್ಧಿಸುವರು. ಆದಿಲ್ ಅವರು 100ಮೀ. ಹರ್ಡಲ್ಸ್ನಲ್ಲಿ ಕರ್ನಾಟಕ ತಂಡವನ್ನು ಪ್ರತಿನಿಧಿಸುವರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಥ್ಲೆಟಿಕ್ ಸಂಸ್ಥೆಯ ಗೌರವ ಸಲಹೆಗಾರರಾದ ಅಶೋಕ್ ಅಡ್ಯಂತಾಯ, ನಿಟ್ಟೆ ವಿದ್ಯಾಸಂಸ್ಥೆಯ ನಿರ್ದೇಶಕ ಯೋಗೀಶ್ ಹೆಗ್ಡೆ, ಜಿಲ್ಲಾ ಸಂಸ್ಥೆಯ ಅಧ್ಯಕ್ಷ ಡಾ.ಕೆಂಪರಾಜ್ ಎಚ್.ಬಿ., ಕಾರ್ಯದರ್ಶಿ ದಿನೇಶ್ ಕುಮಾರ್, ಸಂಘಟನಾ ಕಾರ್ಯದರ್ಶಿ ನಾರಾಯಣ ದೇವಾಡಿಗ, ಲಚ್ಚೇಂದ್ರ, ಜಿಲ್ಲಾ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರೋಷನ್ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.