ಉಡುಪಿ: ನ. 8, 9 ರಂದು ರಾಷ್ಟ್ರಮಟ್ಟದ ಸಮ್ಮೇಳನ

ಉಡುಪಿ: ದಿ ಇನ್‌ಸ್ಟಿಟ್ಯೂಟ್ ಆಫ್ ಚಾರ್ಟೆರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ (ಐಸಿಎಐ) ಉಡುಪಿ ಶಾಖೆ ವತಿಯಿಂದ ನ.8 ಮತ್ತು 9ರಂದು ಉಡುಪಿಯ ಬಾಸೆಲ್ ಮಿಷನರೀಸ್ ಮೆಮೋರಿಯಲ್ ಆಡಿಟೋರಿಯಂನಲ್ಲಿ ರಾಷ್ಟ್ರೀಯ ಮಟ್ಟದ ಸಮ್ಮೇಳನ ಆಯೋಜಿಸಲಾಗಿದೆ ಎಂದು ಅಧ್ಯಕ್ಷೆ ಅರ್ಚನಾ ಆ‌ರ್. ಮಯ್ಯ ತಿಳಿಸಿದರು.


ಈ‌ ಕುರಿತು ಸುದ್ದಿಗೋಷ್ಠಿಯಲ್ಲಿ‌ಮಾಹಿತಿ ನೀಡಿದ ಅವರು, ಅಂದು ಬೆಳಿಗ್ಗೆ 10ಕ್ಕೆ ಐಸಿಎಐ ಮಾಜಿ ಅಧ್ಯಕ್ಷ ಕೆ. ರಘು ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ದಕ್ಷಿಣ ಪ್ರಾದೇಶಿಕ ಮಂಡಳಿ ಅಧ್ಯಕ್ಷೆ ರೇವತಿ ರಘುನಾಥನ್, ಮಾಜಿ ಅಧ್ಯಕ್ಷ ಅತುಲ್‌ ಕುಮಾ‌ರ್ ಗುಪ್ತಾ ಭಾಗವಹಿಸಲಿದ್ದಾರೆ. ಎರಡು ದಿನಗಳ ಈ ಸಮ್ಮೇಳನದಲ್ಲಿ ಒಂಭತ್ತು ವಿಷಯಾಧಾರಿತ ಅಧಿವೇಶನಗಳು, ಕರ್ನಾಟಕದಿಂದ ಆಯ್ಕೆಯಾದ ಕೇಂದ್ರ ಮಂಡಳಿ, ಸದಸ್ಯ ಮಧುಕರ್‌ ಹಿರೇಗಂಗೆ ಅವರಿಂದ ಒಂದು ವಿಶೇಷ ಅಧಿವೇಶನ, ಎರಡು ಚರ್ಚಾ ಅಧಿವೇಶನ ನಡೆಯಲಿದೆ ಎಂದರು.


ಜಿಎಸ್‌ಟಿ ಆಡಿಟ್ ಜವಾಬ್ದಾರಿಗಳು, ವೃತ್ತಿ ನೈತಿಕತೆ, ಕೃತಕ ಬುದ್ದಿಮತ್ತೆ ಮತ್ತು ನಿಯಂತ್ರಣ ಮತ್ತು ಅನುಸರಣಾ ಕ್ಷೇತ್ರಗಳಲ್ಲಿ ಸಂಭವಿಸುತ್ತಿರುವ ಪರಿವರ್ತನೆ ಕುರಿತು ಚರ್ಚೆಗಳು ನಡೆಯಲಿವೆ. ದೇಶದ ವಿವಿಧ ಭಾಗಗಳಿಂದ 500ಕ್ಕೂ ಅಧಿಕ ಪ್ರತಿನಿಧಿಗಳು ಭಾಗವಹಿಸುವ ನಿರೀಕ್ಷೆಯಿದೆ. ಮೊದಲ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ರಾಘವೇಂದ್ರ ಮೊಗೇರಾಯ, ಕಾರ್ಯದರ್ಶಿ ಅಶ್ವತ್ಥ ಜೆ. ಶೆಟ್ಟಿ, ಖಜಾಂಚಿ ಕೆ.ಲಕ್ಷ್ಮೀಶ ರಾವ್, ಸಹ ಸದಸ್ಯ ಸೋನಿತ್ ಶೆಟ್ಟಿ ಇದ್ದರು.