ಸರ್ಕಾರಿ ಸೌಲಭ್ಯದ ಮಾಹಿತಿ ನೀಡಲು ಅಭಿಯಾನ: ಸರ್ಕಾರಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನ ಅಗತ್ಯ

ಉಡುಪಿ: ಉಡುಪಿ ನಗರ ವ್ಯಾಪ್ತಿಯ ಎಲ್ಲ ಮನೆಗಳ ಬಾಗಿಲಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನಪ್ರಿಯ ಯೋಜನೆಗಳನ್ನು ಕೊಂಡೊಯ್ಯವ ಕಾರ್ಯಕ್ರಮವನ್ನು ಹಾಕಿಕೊಳ್ಳಲಾಗಿದೆ ಎಂದು ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ಹೇಳಿದರು.
ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠ, ಪದ್ಮಶಾಲಿ ವಿಶ್ವಸೇವಾ ಪ್ರತಿಷ್ಠಾನ, ದ.ಕ. ಜಿಲ್ಲಾ ಪದ್ಮಶಾಲಿ ಮಹಾಸಭಾ, ಶಾರದೋತ್ಸವ ಸಮಿತಿ, ರೋಟರಿ ಕ್ಲಬ್‌ ಉಡುಪಿ ರಾಯಲ್‌, ಜಿಲ್ಲಾ ಕಾರ್ಮಿಕ ಇಲಾಖೆ ಮೊದಲಾದ ಸಂಸ್ಥೆಗಳ ಸಹಯೋಗದಲ್ಲಿ ಉಡುಪಿ ಕಿನ್ನಿಮೂಲ್ಕಿ ವೀರಭದ್ರ ದೇವಸ್ಥಾನ ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಆಯುಷ್ಮಾನ್‌ ಆರೋಗ್ಯ ಕರ್ನಾಟಕ ಹಾಗೂ ಸರ್ಕಾರಿ ಯೋಜನೆಗಳ ನೋಂದಣಿ ಮತ್ತು ಮಾಹಿತಿ ಕಾರ್ಯಾಗಾರದಲ್ಲಿ ಮಾತನಾಡಿದರು.
ಸರ್ಕಾರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕುರಿತಂತೆ ಉಡುಪಿ ಶಾಸಕ ಕೆ. ರಘುಪತಿ ಭಟ್‌ ಅವರ ನೇತೃತ್ವದಲ್ಲಿ ಈಗಾಗಲೇ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಗರಸಭೆಯ ಕೆಲವೊಂದು ವಾರ್ಡ್‌ಗಳಲ್ಲಿ ಈ ಬಗ್ಗೆ ಅಭಿಯಾನ ಆರಂಭಿಸಲಾಗಿದೆ ಎಂದರು.
ಸರ್ಕಾರ ಬಡವರ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಮಾಹಿತಿ ಕೊರತೆಯಿಂದ ಅವುಗಳು ಎಲ್ಲರಿಗೂ ತಲುಪುತ್ತಿಲ್ಲ. ಹಾಗಾಗಿ ಇದನ್ನು ಪರಿಣಾಕಾರಿಯಾಗಿ ಅನುಷ್ಠಾನಕ್ಕೆ ತರುವ ಕೆಲಸ ಆಗಬೇಕಿದೆ ಎಂದರು.
ಕಿನ್ನಿಮೂಲ್ಕಿ ವೀರಭದ್ರ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಭಾಚಂದ್ರ ಪದ್ಮಶಾಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ನೇಕಾರರ ಪ್ರಕೋಷ್ಠದ ಅಧ್ಯಕ್ಷ ರತ್ನಾಕರ ಇಂದ್ರಾಳಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವಿವಿಧ ಸಂಘಟನೆಗಳ ಪ್ರಮುಖರಾದ ಎಂ. ಜಯರಾಮ್‌, ಸದಾನಂದ ಶೆಟ್ಟಿಗಾರ್‌, ಬಿ.ಕೆ. ಯಶವಂತ್‌, ಓಂ ಪ್ರಕಾಶ್‌ ಡಿ. ಶೆಟ್ಟಿಗಾರ್‌, ಶಿವಪ್ರಸಾದ್‌ ಶೆಟ್ಟಿಗಾರ್‌, ವಿದ್ಯಾಚರಣ್‌ ಶೆಟ್ಟಿಗಾರ್‌, ಜಿಲ್ಲಾ ವಕ್ಫ್‌ ಮಂಡಳಿ ಅಧ್ಯಕ್ಷ ದಾವೂದ್‌ ಅಬೂಬಕರ್‌, ನಗರಸಭಾ ಸದಸ್ಯರಾದ ರಶ್ಮಿ ಭಟ್‌, ಬಾಲಕೃಷ್ಣ ಶೆಟ್ಟಿ, ನಗರ ಪ್ರಾಥಮಿಕ ಆರೋಗ್ಯಾಧಿಕಾರಿ ಡಾ. ಹೇಮಂತ್‌, ಬೀದಿ ಕಾರ್ಮಿಕರ ಕಲ್ಯಾಣ ಇಲಾಖೆಯ ವೈದ್ಯಾಧಿಕಾರಿ ಅಕ್ಷತಾ ಆರ್‌. ನಾಯಕ್‌, ಜಿಲ್ಲಾ ಆರೋಗ್ಯ ನಿರೀಕ್ಷಕ ಜೀವನ್‌ ಕುಮಾರ್‌, ಯೋಗ ಶಿಕ್ಷಕಿ ಮಮತಾ ಶೆಟ್ಟಿಗಾರ್‌ ಉಪಸ್ಥಿತರಿದ್ದರು.
ಕಾರ್ಯಕ್ರಮದ ಸಂಯೋಜಕ ಮಂಜುನಾಥ್‌ ಮಣಿಪಾಲ ಸ್ವಾಗತಿಸಿದರು. ನಾಗರಾಜ್‌ ಕಿನ್ನಿಮೂಲ್ಕಿ ಕಾರ್ಯಕ್ರಮ ನಿರೂಪಿಸಿದರು.