ಉಡುಪಿ: ಎಕೆಎಂಎಸ್ ಬಸ್ ಮಾಲೀಕ, ಉದ್ಯಮಿ, ಆತ್ರಾಡಿ ನಿವಾಸಿ ಸೈಪುದ್ದೀನ್ ನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಲ್ಪೆ ಕೊಡವೂರು ಸಮೀಪದ ಸಾಲ್ಮರ ಎಂಬಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದೆ.
ಸೈಫುದ್ದೀನ್ ಅವರು ತಮ್ಮ ಮನೆಯಲ್ಲಿ ಒಬ್ಬರೇ ಇರುವ ವೇಳೆ ಆಗಮಿಸಿದ ಮೂರು ಮಂದಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಗೈದಿದ್ದಾರೆ ಎಂದು ತಿಳಿದುಬಂದಿದೆ.
ಯಾವುದೋ ವ್ಯವಹಾರ ಸಂಬಂಧಿಸಿದಂತೆ ಮಾತುಕತೆಗೆ ನಡೆಸಲು ಸೈಫುದ್ದೀನ್ ತನ್ನ ಕೊಡವೂರಿನ ಮನೆಗೆ ಬಂದಿದ್ದ ಎನ್ನಲಾಗಿದೆ. ಈ ಸಂದರ್ಭದಲ್ಲಿ ಪರಿಚಯಸ್ಥರೇ ಆದ ಕಂಬಳ್ಳಿಯ ಜನತಾ ಕಾಲೋನಿಯ ಮೊಹಮ್ಮದ್ ಶರೀಫ್, ಸುರತ್ಕಲ್ ಚೊಕ್ಕಬೆಟ್ಟಿನ ಶುಕ್ರು ಯಾನೆ ಅದ್ದು ಮತ್ತು ಡಯಾನ ಕುಕ್ಕಿಕಟ್ಟೆಯ ಫೈಜಲ್ ಖಾನ್ ಎಂಬವರು ಮಾರಕಾಸ್ತ್ರಗಳಿಂದ ಇರಿದು ಕೊಲೆಗೈದು ಸ್ಥಳದಿಂದ ಪರಾರಿಯಾಗಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಮುಂಬೈನಲ್ಲಿ 2020ರ ಫೆಬ್ರವರಿಯಲ್ಲಿ ಲೇಡಿಸ್ ಬಾರ್ ಮಾಲೀಕ ವಶಿಷ್ಟ ಯಾದವ್ ಎಂಬಾತನನ್ನು ಹತ್ಯೆಗೈದು ಜೈಲಿನಲ್ಲಿದ್ದಾಗ ಯಾವುದೇ ಸಹಕಾರ ನೀಡಿಲ್ಲ ಎಂಬ ಕಾರಣಕ್ಕೆ ಈ ಮೂವರು ಕೋಪಕೊಂಡಿದ್ದರು ಎನ್ನಲಾಗಿದೆ. ಅಲ್ಲದೆ, ಈ ಹಿಂದೆ ಶರೀಫ್ ಎಂಬಾತನೊಂದಿಗೆ ಜಗಳ ನಡೆದಿತ್ತು ಎಂಬ ಮಾಹಿತಿ ಹರಿದಾಡುತಿದೆ. ಈ ಕಾರಣದಿಂದಲೇ ಈ ಮೂವರು ಸೇರಿಕೊಂಡು ಹತ್ಯೆ ಮಾಡಿರುವ ಶಂಕೆ ವ್ಯಕ್ತವಾಗಿದೆ.


















