ಉಡುಪಿ: ಮುಚ್ಚಿಟ್ಟ ದಲಿತ ಚರಿತ್ರೆ ಕೃತಿ ಬಿಡುಗಡೆ: ಲೇಖಕರ ಜತೆ ಸಂವಾದ

ಉಡುಪಿ: ಲೇಖಕ ರಾಕೇಶ್ ಶೆಟ್ಟಿ ಅವರ ಕೃತಿ ಮುಚ್ಚಿಟ್ಟ ದಲಿತ ಚರಿತ್ರೆ ಕೃತಿಯ ಸಾಂಕೇತಿಕ ಬಿಡುಗಡೆ ಹಾಗೂ‌ ಲೇಖಕರ ಜೊತೆ ಸಂವಾದ ಕಾರ್ಯಕ್ರಮ ಶನಿವಾರ (ಸೆ.5) ಉಡುಪಿ ಅಂಬಲಪಾಡಿಯ ಹೋಟೆಲ್ ಕಾರ್ತಿಕ್ ಎಸ್ಟೇಟ್ ನಲ್ಲಿ ನಡೆಯಿತು.
ಹಿರಿಯ ಪತ್ರಕರ್ತ ಗುರುವಪ್ಪ ಬಾಳೆಪುಣಿ ಅವರು ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು. ಡಾ| ಬಿ.ಆರ್. ಅಂಬೇಡ್ಕರ್ ಅವರಿಗೆ ಸರಿಸಮನಾಗಿ ದಲಿತರ ಪರ  ಜೋಗೇಂದ್ರನಾಥ ಅವರು ಬಹಳ ಹಿಂದೆ ಹೋರಾಟ ನಡೆಸಿದ್ದರು. ಆದರೆ ಅವರ ಬಗ್ಗೆ ಇತಿಹಾಸದಲ್ಲಿ‌ ಯಾವುದೇ ಉಲ್ಲೇಖವಿಲ್ಲ. ಜೋಗೇಂದ್ರನಾಥ್ ಕುರಿತಾದ ಹಾಗೂ ಆ ಕಾಲಘಟ್ಟದ ಸಂಘರ್ಷಗಳ ಕುರಿತ ವಿವರಗಳು, ಅನೇಕ‌ ಪೂರಕ ವಿಚಾರಗಳನ್ನು ಲೇಖಕರು ಈ ಪುಸ್ತಕದಲ್ಲಿ‌ ತಿಳಿಸಿದ್ದಾರೆ ಎಂದರು.
ಲೇಖಕ ರಾಕೇಶ್ ಶೆಟ್ಟಿ ಮಾತನಾಡಿ, ಮುಚ್ಚಿಟ್ಟ ದಲಿತ ಚರಿತ್ರೆ ಪುಸ್ತಕದಲ್ಲಿ ಜೋಗೇಂದ್ರನಾಥ ಅವರ ವಿವರದ ಜತೆಗೆ `ದಲಿತ -ಮುಸ್ಲಿಮ್’  ರಾಜಕಾರಣದ ಆಯಾಮಗಳ ಕುರಿತು ಚರ್ಚಿಸುವ ವಿಚಾರಗಳಿವೆ. ಅವರ ಹೋರಾಟವನ್ನು ಹುನ್ನಾರ ನಡೆಸಿ ಮುಚ್ಚಿ ಹಾಕಿರುವ ವಿಚಾರಗಳಿವೆ ಎಂದರು.
ಜಿ.ಪಂ. ಅಧ್ಯಕ್ಷ ದಿನಕರ್ ಬಾಬು ಕಾರ್ಯಕ್ರಮವನ್ನು ಉದ್ಘಾಟಿಸಿ ಅಧ್ಯಕ್ಷತೆ ವಹಿಸಿದರು. ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವಂಸತ ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು. ಅನಂತರ ಪುಸ್ತಕದ ಕುರಿತಾಗಿ ಸಂವಾದ ಕಾರ್ಯಕ್ರಮ ನಡೆಯಿತು.