ಸಿದ್ದರಾಮಯ್ಯ ಕ್ಷುಲ್ಲಕ-ಚೀಪ್ ಮೆಂಟಾಲಿಟಿ ಹೊಂದಿರುವ ರಾಜಕಾರಣಿ: ಶೋಭಾ ಕರಂದ್ಲಾಜೆ

ಉಡುಪಿ: ವೀರ ಸವಾರ್ಕರ್‌ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡಿದ್ದಾರೆ. ಅದಕ್ಕಾಗಿ ಅವರಿಗೆ ಗೌರವ ಸಲ್ಲಿಸುವ ಕೆಲಸ ಆಗಬೇಕು. ಸ್ವಾತಂತ್ರ್ಯಕ್ಕಾಗಿ ಯಾರೆಲ್ಲ ಹೋರಾಟ ಮಾಡಿದ್ದಾರೆಂಬುವುದೇ ಗೊತ್ತಿಲ್ಲದ ಸಿದ್ದರಾಮಯ್ಯಗೆ ಇದೆಲ್ಲ ಅರ್ಥ ಆಗುವುದಿಲ್ಲ. ಅವರು ಓರ್ವ ಕ್ಷುಲಕ, ಚೀಪ್‌ ಮೆಂಟಾಲಿಟಿ ಹೊಂದಿರುವ ರಾಜಕಾರಣಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಟೀಕಿಸಿದರು.
ಉಡುಪಿಯಲ್ಲಿ ಗುರುವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸವಾರ್ಕರ್‌ ಅವರ ಇಡೀ ಕುಟುಂಬ ದೇಶಕ್ಕಾಗಿ ತ್ಯಾಗ ಮಾಡಿದೆ. ಸಿದ್ದರಾಮಯ್ಯನವರಿಗೆ ಕೇವಲ ವೋಟ್‌, ಜಾತಿ, ಧರ್ಮ ಮಾತ್ರ ಕಾಣುತ್ತದೆ. ಇಂತಹ ವಿಚಾರಗಳೆಲ್ಲ ಗೊತ್ತಾಗುವುದಿಲ್ಲ. ಸಿದ್ದರಾಮಯ್ಯನವರ ಸರ್ಟಿಫಿಕೇಟ್‌ ಸವಾರ್ಕರ್‌ ಹಾಗೂ ಗಾಂಧೀಜಿಗೆ ಬೇಕಾಗಿಲ್ಲ ಎಂದು
ಹರಿಹಾಯ್ದರು.
ಸಿದ್ದರಾಮಯ್ಯ ಸ್ವಾತಂತ್ರ್ಯ ಹೋರಾಟಗಾರರಿಗೆ ಅವಮಾನ ಮಾಡಿದ್ದಾರೆ. ರಾಜಕೀಯ ಲಾಭಕ್ಕಾಗಿ ಸ್ವಾತಂತ್ರ್ಯ ಹೋರಾಟಗಾರರ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ. ಅವರು ಕೂಡಲೇ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಮಾಜಿ ಸಚಿವ ಡಿ.ಕೆ. ಶಿವಕುಮಾರ್‌ ಅವರ ಹಲವಾರು ಪ್ರಕರಣಗಳು ಇನ್ನೂ ಕೋರ್ಟ್‌ನಲ್ಲಿದೆ. ಅದೆಲ್ಲವೂ ತನಿಖೆಯ ಹಂತದಲ್ಲಿದೆ. ಅವರು ಜೈಲಿನಿಂದ ಬಿಡುಗಡೆ ಆಗಿರುವುದಕ್ಕೂ ರಾಜ್ಯದ ಉಪಚುನಾವಣೆಗೂ ಯಾವುದೇ ಸಂಬಂಧ ಇಲ್ಲ. ಡಿಕೆಶಿ ಮೊದಲು ತಮ್ಮ ಮೇಲಿರುವ ಪ್ರಕರಣಗಳಿಂದ ದೋಷ ಮುಕ್ತರಾಗಿ ಹೊರಬರಲಿ. ಆ ನಂತರ ಚುನಾವಣೆಯಲ್ಲಿ ಭಾಗವಹಿಸಲಿ ಎಂದರು.
ಕಾಂಗ್ರೆಸ್‌ನವರು ಯಾಕೆ ವಿಜಯೋತ್ಸವ, ಸಂಭ್ರಮಾಚರಣೆ ಆಚರಿಸುತ್ತಿದ್ದಾರೆ ಎನ್ನುವುದನ್ನು ಅವರೇ ಹೇಳಬೇಕು. ಡಿಕೆಶಿ ಏನಾದರೂ ಸ್ವಾತಂತ್ರ್ಯ ಹೋರಾಟ ಮಾಡಿ ಜೈಲಿನಿಂದ ಹೊರಗೆ ಬಂದಿದ್ದಾರೆಯೇ ಎಂಬ ಪ್ರಶ್ನೆಯನ್ನು ಸಿದ್ದರಾಮಯ್ಯನವರಿಗೆ ಕೇಳಬೇಕು ಎಂದು ಕುಟುಕಿದರು.
ಮಹಾರಾಷ್ಟ್ರ ಹಾಗೂ ಹರಿಯಾಣ ರಾಜ್ಯದಲ್ಲಿ ಉತ್ತಮ ಸ್ಪರ್ಧೆಯನ್ನು ನೀಡಿದ್ದೇವೆ. ಎರಡೂ ರಾಜ್ಯಗಳಲ್ಲೂ ಅತ್ಯಂತ ಜನಪರವಾದ ಸರ್ಕಾರವನ್ನು ಕೊಟ್ಟಿದ್ದೇವೆ. ಮಹಾರಾಷ್ಟ್ರದಲ್ಲಿ ಬಿಜೆಪಿ ಹಾಗೂ ಶಿವಸೇನೆ ಮೈತ್ರಿ ಅತ್ಯಂತ ದೊಡ್ಡ ಬಹುಮತದೊಂದಿಗೆ ಮತ್ತೊಮ್ಮೆ ಸರ್ಕಾರ ರಚನೆ ಮಾಡಲಿದೆ. ಹರಿಯಾಣದಲ್ಲಿಯೂ ಸಹ ಒಳ್ಳೆಯ ಸಾಧನೆ ಮಾಡಿದ್ದೇವೆ. ಅಲ್ಲಿಯೂ ನಾವೇ ಸರ್ಕಾರ ಮಾಡುತ್ತೇವೆಂಬ ಸಂಪೂರ್ಣ ವಿಶ್ವಾಸ ಇದೆ ಎಂದು ಹೇಳಿದರು.