ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವಿಭಾಗ ತೆರೆಯುವಂತೆ ಶಾಸಕ ರಘುಪತಿ ಭಟ್ ಒತ್ತಾಯ

ಉಡುಪಿ: ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಸರ್ಕಾರಿ ವಿಭಾಗವೊಂದನ್ನು ತೆರೆದು, ಸರ್ಕಾರಿ ವೈದ್ಯಾಧಿಕಾರಿಗಳನ್ನು ಮಾಡಬೇಕು ಎಂದು ಶಾಸಕ ಕೆ. ರಘುಪತಿ ಭಟ್ ಆಗ್ರಹಿಸಿದ್ದಾರೆ.
ಕೂಸಮ್ಮಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಇಂದು ಆರೋಗ್ಯ ಸಚಿವ ಶ್ರೀರಾಮುಲು ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಸರ್ಕಾರಿ ವಿಭಾಗವೊಂದನ್ನು ತೆರೆದರೆ, ಜನರಲ್ಲಿ ಇದು ಸರ್ಕಾರಿ ಆಸ್ಪತ್ರೆ ಎಂಬ ಭಾವನೆ ಬರುತ್ತದೆ. ಅಲ್ಲದೆ ಸರ್ಕಾರದಿಂದಲೂ ಹೆಚ್ಚಿನ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಿಆರ್ ಗ್ರೂಪ್ ನ ಜನರಲ್ ಮ್ಯಾನೇಜರ್ ಕುಶಾಲ್ ಶೆಟ್ಟಿ, ಸರ್ಕಾರಿ ವಿಭಾಗ ತೆರೆಯಲು ಹೇಗೆ ಸಾಧ್ಯವಾಗುತ್ತದೆ. ಇದರಿಂದ ಆಸ್ಪತ್ರೆಯಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಸರ್ಕಾರಿ ಹಾಗೂ ಖಾಸಗಿ ವಿಭಾಗಗಳೆಂದು ಪ್ರತ್ಯೇಕಿಸಿ, ಎರಡು ವಿಭಾಗಗಳನ್ನು ಒಟ್ಟಿಗೆ ನಿರ್ವಹಣೆ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿದರು.
ಇದಕ್ಕೆ ಅಸಮಾಧಾನಗೊಂಡ ಶಾಸಕರು, ಸರ್ಕಾರಿ ವಿಭಾಗ ತೆರೆದರೆ ನಿಮಗೆ ಏನು ಸಮಸ್ಯೆ ಎಂದು ಪ್ರಶ್ನಿಸಿದರು. ಅಲ್ಲದೆ, ಈ ಹಿಂದೆ ಸರ್ಕಾರಿ ಆಸ್ಪತ್ರೆ ‌ಇದ್ದಾಗ ಈಗಿರುವಷ್ಟು ಮೂಲಸೌಕರ್ಯ ಇರಲಿಲ್ಲ.‌ ಆದ್ರೆ ಜನರಿಗೆ ಉತ್ತಮ‌ ಚಿಕಿತ್ಸೆ ನೀಡಲಾಗುತ್ತಿತ್ತು ಎಂದು ತಿರುಗೇಟು ನೀಡಿದರು.
ಶಾಸಕರ ಮಾತಿಗೆ ಧ್ವನಿಗೂಡಿಸಿದ ಜಿಪಂ ಗೀತಾಂಜಲಿ ಸುವರ್ಣ, ಈಗ ಗಂಭೀರ ಪ್ರಕರಣಗಳನ್ನು ನಿಭಾಯಿಸಲು ಹಿಂಜರಿಯುತ್ತಾರೆ. ನೀವು ಕೆಎಂಸಿಗೆ ಹೋಗಿ ಎಂದು ಸಲಹೆ ನೀಡುತ್ತಾರೆ. ಸ್ವತಃ ನನಗೆ ಅನುಭವ ಆಗಿದೆ. ಬಡ ರೋಗಿಗಳಿಗೆ ಇವರಿಂದ ಚಿಕಿತ್ಸೆ ನೀಡಲು ಆಗದಿದ್ದರೆ ಆಸ್ಪತ್ರೆ ಇದ್ದು ಏನು ಪ್ರಯೋಜನ ಎಂದು ಬೇಸರ ವ್ಯಕ್ತಪಡಿಸಿದ ಅವರು, ಸ್ಥಳೀಯ ಜನಪ್ರತಿನಿಧಿಗಳಿಗೆ ಯಾವುದೇ ಮರ್ಯಾದೆ ಕೊಡಲ್ಲ ಎಂದು ಆರೋಪಿದರು.
ಈ ವೇಳೆ ಸಿಟ್ಟಿಗೆದ್ದ ಕುಶಾಲ್ ಶೆಟ್ಟಿ, ತಾಯಿ‌ ಮತ್ತು ಮಕ್ಕಳ ಆರೋಗ್ಯದ ವಿಚಾರದಲ್ಲಿ ನಾವು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲವೆಂದು ಮುಖಕ್ಕೆ ಹೊಡೆದಂತೆ ಹೇಳಿದರು. ಆಗ ಮಧ್ಯಪ್ರವೇಶಿಸಿದ ಸಚಿವ ಶ್ರೀರಾಮುಲು, ಈ ಬಗ್ಗೆ ಬೆಂಗಳೂರಿನಲ್ಲಿ ಸಭೆ ಕರೆದು, 15 ದಿನಗಳೊಳಗೆ ಸಮಸ್ಯೆ ಸರಿಪಡಿಸಲು ಪ್ರಯತ್ನಿಸುತ್ತೇನೆ ಎಂದು ಭರವಸೆ ನೀಡಿದರು.