ಸರಕಾರದ ವತಿಯಿಂದ ಕರಾಟೆ ಸ್ಪರ್ಧೆ ಆಯೋಜಿಸಲು ಚಿಂತನೆ: ರಘುಪತಿ ಭಟ್

ಉಡುಪಿ: ಸರ್ಕಾರದ ವತಿಯಿಂದ ಕರಾಟೆ ಸ್ಪರ್ಧಾಕೂಟಗಳನ್ನು ಆಯೋಜಿಸಲು ಚಿಂತನೆ ನಡೆಸಲಾಗುವುದು ಎಂದು ಶಾಸಕ ಕೆ. ರಘುಪತಿ ಭಟ್‌ ಹೇಳಿದರು.
ಬುಡೋಕಾನ್‌ ಕರಾಟೆ ಹಾಗೂ ಸೆಲ್ಫ್‌ ಡಿಫೆನ್ಸ್‌ ಅಸೋಸಿಯೇಶನ್‌ ಆಫ್‌ ಇಂಡಿಯಾ ವತಿಯಿಂದ ಕರಂಬಳ್ಳಿ ಶ್ರೀ ವೆಂಕಟರಮಣ ದೇವಸ್ಥಾನ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ರಾಜ್ಯಮಟ್ಟದ ಅಂತರ ಶಾಖಾ ಕರಾಟೆ ಸ್ಪರ್ಧಾಕೂಟ ‘ಬುಡೋಕಾನ್‌ ಧಮಾಕ–2019’ಕ್ಕೆ ಶನಿವಾರ ಚಾಲನೆ ನೀಡಿ ಮಾತನಾಡಿದರು.
ಸರ್ಕಾರದಿಂದ ಕರಾಟೆ ಸ್ಪರ್ಧಾಕೂಟ ಆಯೋಜಿಸುವಂತೆ ಬುಡೋಕಾನ್‌ ಕರಾಟೆ ಶಿಕ್ಷಕರಿಂದ ಬೇಡಿಕೆ ಬಂದಿದ್ದು, ಈ ಬಗ್ಗೆ ಆದಷ್ಟು ಬೇಗ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಸ್ಪರ್ಧಾಕೂಟ ನಡೆಸಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಧಿಕಾರಿ ಜಿ. ಜಗದೀಶ್‌ ಮಾತನಾಡಿ, ಕರಾಟೆ ಆತ್ಮರಕ್ಷಣಾ ಕ್ರೀಡೆ. ಇದು ಮಕ್ಕಳ ದೈಹಿಕ ಕ್ಷಮತೆಯನ್ನು ವೃದ್ಧಿಸಲು ಸಹಕಾರಿಯಾಗಿದೆ. ಯಾವುದೇ ಕ್ರೀಡೆಯಲ್ಲಿ ಸೋಲು, ಗೆಲುವು ಮುಖ್ಯವಲ್ಲ. ಅದರಲ್ಲಿ ಭಾಗವಹಿಸುವ ಮನೋಭಾವವನ್ನು ಎಲ್ಲರೂ ಬೆಳೆಸಿಕೊಳ್ಳಬೇಕು ಎಂದರು.
ಕರಂಬಳ್ಳಿ ವೆಂಕಟರಮಣ ದೇವಸ್ಥಾನದ ಪ್ರಧಾನ ಅರ್ಚಕ ಕೆ. ದಿವಾಕರ ಐತಾಳ್‌, ನಗರಸಭಾ ಸದಸ್ಯರಾದ ಬಾಲಕೃಷ್ಣ ಶೆಟ್ಟಿ, ಪ್ರಭಾಕರ ಪೂಜಾರಿ, ರಜನಿ ಹೆಬ್ಬಾರ್‌, ಮುನಿಯಾಲು ಉದಯಕೃಷ್ಣಯ್ಯ ಚಾರಿಟೇಬಲ್‌ ಟ್ರಸ್ಟ್‌ನ ಪ್ರವರ್ತಕ ಮುನಿಯಾಲು ಉದಯ ಕುಮಾರ್‌ ಶೆಟ್ಟಿ, ನಿಟ್ಟೂರು ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ ಸಂತೋಷ್‌
ಕರ್ನೇಲಿಯೋ, ಎಸ್‌ಕೆಜಿಐ ಕೋ- ಆಪರೇಟಿವ್‌ ಸೊಸೈಟಿ ನಿರ್ದೇಶಕ ಉಪೇಂದ್ರ ಆಚಾರ್ಯ, ಉದ್ಯಮಿಗಳಾದ ಹರಿಯಪ್ಪ ಕೋಟ್ಯಾನ್‌, ಅಕ್ಷಯ ಪೂಜಾರಿ, ಪಿ. ರಾಮಚಂದ್ರ ಆಚಾರ್ಯ, ರಾಜ್ಯ ಕಾರಾಟೆ ಶಿಕ್ಷಕ ಸಂಘದ ಅಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಬೆಳ್ಮಣ್‌ ಬುಡೋಕಾನ್ ಕಾರಾಟೆ ಮಾರ್ಷಲ್‌ ಆರ್ಟ್ಸ್‌ನ ಮುಖ್ಯ ಶಿಕ್ಷಕ ಸತೀಶ್‌ ಬೆಳ್ಮಣ್ ಉಪಸ್ಥಿತರಿದ್ದರು.
ಉಡುಪಿ ಬುಡೋಕಾನ್‌ ಕರಾಟೆಯ ಮುಖ್ಯ ಶಿಕ್ಷಕ ಲಕ್ಷ್ಮೀನಾರಾಯಣ ಆಚಾರ್ಯ ಸ್ವಾಗತಿಸಿದರು. ಸಂಘಟನಾ ಸಮಿತಿಯ ಕೃಷ್ಣ ಶ್ರೀಧರನ್‌ ವಂದಿಸಿದರು.