ಉಡುಪಿ: ಡೆತ್ ನೋಟ್ ನಲ್ಲಿ ಸಚಿವ ಈಶ್ವರಪ್ಪ ಹೆಸರು ಬರೆದಿಟ್ಟು ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆ

ಉಡುಪಿ: ಸಚಿವ ಕೆ.ಎಸ್. ಈಶ್ವರಪ್ಪ ವಿರುದ್ಧದ 40 ಪರ್ಸೆಂಟ್​​ ಕಮಿಷನ್​ ಆರೋಪ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದ್ದು, ಗುತ್ತಿಗೆದಾರ ಸಂತೋಷ್ ಪಾಟೀಲ್ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಉಡುಪಿ ಕೆಎಸ್‌ಆರ್‌ಟಿಸಿ ಸಮೀಪದ ಶಾಂಭವಿ ಹೋಟೆಲ್‌ನ ರೂಮ್‌ವೊಂದರಲ್ಲಿ ಮೃತದೇಹ ಪತ್ತೆಯಾಗಿದೆ. ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕಿಸಲಾಗಿದೆ.

40 ಕಮಿಷನ್ ಆರೋಪ ಮಾಡಿ ತನ್ನ ಊರು ತೊರೆದಿದ್ದ‌‌ರು. ಬೆಳಗಾವಿಯ ಗುತ್ತಿಗೆದಾರ ಸಂತೋಷ ಪಾಟೀಲ್ ಡೆತ್ ನೋಟ್ ಬರೆದಿಟ್ಟು ನಾಪತ್ತೆಯಾಗಿದ್ದರು.

ಮಂಗಳವಾರ ಬೆಳಗ್ಗೆ ಅವರ ಮೊಬೈಲ್ ಲೋಕಷನ್ ಉಡುಪಿಯಲ್ಲಿ ಇರುವ ಬಗ್ಗೆ ಪತ್ತೆಯಾಗಿತ್ತು.

ಕೆಲ ಮಾಧ್ಯಮ ಪ್ರತಿನಿಧಿಗಳ ಮೊಬೈಲ್‌ಗೆ ಡೆತ್‌ನೋಟ್ ವಾಟ್ಸ್​​ ಆ್ಯಪ್​​ ಮೆಸೇಜ್ ಕಳಿಸಿ ನಾಪತ್ತೆ ಆಗಿದ್ದಾರೆ ಎಂದು ತಿಳಿದು ಬಂದಿದೆ.

‘ನನ್ನ ಸಾವಿಗೆ ಸಚಿವ ಕೆ.ಎಸ್‌‌.ಈಶ್ವರಪ್ಪ ಕಾರಣ’ ಎಂದು ವಾಟ್ಸ್​​ ಆ್ಯಪ್​​ ಮೆಸೇಜ್‌ನಲ್ಲಿ ಗುತ್ತಿಗೆದಾರ ಸಂತೋಷ ಪಾಟೀಲ್ ಉಲ್ಲೇಖಿಸಿದ್ದಾರೆ. ಡೆತ್‌ನೋಟ್ ಮೆಸೇಜ್ ಮಾಹಿತಿ ಬೆನ್ನಲ್ಲೇ ಸಂತೋಷ ಪಾಟೀಲ್ ಪತ್ತೆಗೆ ಪೊಲೀಸರು ಮುಂದಾಗಿದ್ದಾರೆ.

ಅವರ ಮೊಬೈಲ್ ಉಡುಪಿಯಲ್ಲಿ ಆ್ಯಕ್ಟಿವ್ ಇದೆ ಎಂಬ ಮಾಹಿತಿ ಲಭ್ಯವಾಗಿರುವ ಹಿನ್ನೆಲೆಯಲ್ಲಿ ಉಡುಪಿ ಪೊಲೀಸರು ಸಾಕಷ್ಟು ತಪಾಸಣೆ ನಡೆಸಿ, ಪತ್ತೆ ಹಚ್ಚಿದ್ದಾರೆ.

ಸ್ಥಳಕ್ಕೆ ಎಸ್ಪಿ ಎನ್. ವಿಷ್ಣುವರ್ಧನ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಸ್‌.ಟಿ. ಸಿದ್ಧಲಿಂಗಪ್ಪ ಭೇಟಿ ನೀಡಿದ್ದಾರೆ.