ಮೂರು ದಿನಗಳೊಳಗೆ ಉಡುಪಿ ಜಿಲ್ಲೆ ಗ್ರೀನ್ ಝೋನ್ ಗೆ ಸೇರ್ಪಡೆ: ನಿರ್ಬಂಧ ಸಡಿಲಿಕೆಗೆ ಕ್ರಮ: ಸಚಿವ ಬೊಮ್ಮಾಯಿ

ಉಡುಪಿ: ಕೋವಿಡ್-19 ನಿಂದ ಮುಕ್ತವಾಗಿರುವ ಉಡುಪಿ ಜಿಲ್ಲೆ ಮೂರು ದಿನಗಳಲ್ಲಿ ಆರೆಂಜ್ ಝೋನ್ ನಿಂದ ಗ್ರೀನ್ ಝೋನ್ ಗೆ ಸೇರ್ಪಡೆಯಾಗಲಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ ಗೃಹ ಸಚಿವ  ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಮಣಿಪಾಲ ರಜತಾದ್ರಿಯಲ್ಲಿರುವ ಉಡುಪಿ ಜಿಪಂ ಸಭಾಂಗಣದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾಹಿತಿ ನೀಡಿದರು.
ಜಿಲ್ಲೆಯು ಹಸಿರು ವಲಯಕ್ಕೆ ಸೇರ್ಪಡೆಗೊಂಡ ಬಳಿಕ ರಾಜ್ಯದ 11 ಹಸಿರು ವಲಯ ಜಿಲ್ಲೆಗಳಂತೆ ಉಡುಪಿಯಲ್ಲೂ ನಿರ್ಬಂಧ ಸಡಿಲಿಕೆ ಮಾಡಲು ಕ್ರಮ ವಹಿಸಲಾಗುವುದು ಎಂದರು.
ಹೊರರಾಜ್ಯ ಹಾಗೂ ಜಿಲ್ಲೆಗಳಿಂದ ಉಡುಪಿ ಜಿಲ್ಲೆಗೆ ಬರುವವರಿಗೆ ನಿರ್ಬಂಧ ವಿಧಿಸಲಾಗಿದ್ದು, ಕುಟುಂಬದಲ್ಲಿ ಯಾರಾದರೂ ಮೃತಪಟ್ಟರೆ ಐದಕ್ಕಿಂತ ಹೆಚ್ಚು ಜನರಿಗೆ ಪ್ರವೇಶ ನೀಡಬಾರದು. ಹಾಗೆ ತುರ್ತು ಚಿಕಿತ್ಸೆಗೆ ಮಾತ್ರ ಪ್ರವೇಶ ಕಲ್ಪಿಸಬೇಕು. ಅದನ್ನು ಹೊರತುಪಡಿಸಿ ಯಾವುದೇ ಪಾಸ್ ಇದ್ದರೂ ಪ್ರವೇಶ ನೀಡಬಾರದು ಎಂದು ತಿಳಿಸಿದ್ದಾರೆ.
ಜಿಲ್ಲೆಗೆ ಅತ್ಯಂತ ಅವಶ್ಯಕವಾಗಿರುವ 3500 ಕೋವಿಡ್ ಪಿಪಿಇ ಕಿಟ್ ಗಳನ್ನು ತುರ್ತಾಗಿ ತರಿಸುವ ಕೆಲಸ ಮಾಡಲಾಗುವುದು. ಉಡುಪಿ ಜಿಲ್ಲಾಸ್ಪತ್ರೆಯಲ್ಲಿ ಕನಿಷ್ಟ 50 ಮತ್ತು ಎಲ್ಲ ತಾಲೂಕು ಆಸ್ಪತ್ರೆಗಳಲ್ಲಿ 5-10 ಬೆಡ್ ಗಳಿಗೆ ಕೇಂದ್ರಿಕೃತ ಆಮ್ಲಜನಕ (ಸೆಂಟ್ರಲೈಸಡ್ ಆಕ್ಸಿಜನ್) ಪೂರೈಕೆ ವ್ಯವಸ್ಥೆಯನ್ನು ಮಾಡಲಾಗುವುದು. ಇದರಿಂದ ಕೋವಿಡ್ ರೋಗಿಗಳಿಗೆ ಪ್ರಾಥಮಿಕ ಹಂತದಲ್ಲಿ ಚಿಕಿತ್ಸೆ ನೀಡಲು ಸಹಕಾರಿ ಯಾಗುತ್ತದೆ. ಅದರ ಬಗ್ಗೆ ಜಿಲ್ಲಾಡಳಿತ ಕ್ರಮ ತೆಗೆದುಕೊಳ್ಳಲಿದೆ ಎಂದು ಹೇಳಿದರು.
ಮೀನುಗಾರಿಕೆಗೆ ಈಗಾಗಲೇ ಅನುಮತಿ ನೀಡಲಾಗಿದ್ದು, ಇನ್ನು ಉಳಿದಂತೆ ಇರುವ ಸಮಸ್ಯೆ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಜಗದೀಶ್, ಮಂಗಳೂರು ಪಶ್ಚಿಮ ವಲಯದ ಐಜಿಪಿ ದೇವಜ್ಯೋತಿ ರೇ, ಎಸ್ಪಿ ವಿಷ್ಣುವರ್ಧನ್, ಜಿಪಂ ಸಿಇಓ ಪ್ರೀತಿ ಗೆಹ್ಲೋಟ್, ಜಿಪಂ ಅಧ್ಯಕ್ಷ ದಿನಕರ ಬಾಬು, ಶಾಸಕರಾದ ರಘುಪತಿ ಭಟ್, ಸುನೀಲ್ ಕುಮಾರ್, ಸುಕುಮಾರ್ ಶೆಟ್ಟಿ, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಆರ್.ಮೆಂಡನ್ ಇದ್ದರು.