ಉಡುಪಿ: ಜೀವನದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ತಂಡ ಸ್ಫೂರ್ತಿ ಇರಬೇಕು. ಅಂಥ ಸ್ಪೂರ್ತಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಲ್ಲಿ ಬೆಳೆಸುತ್ತದೆ ಎಂದು ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯ ಮುಖ್ಯ ಆಯುಕ್ತ ಪಿ.ಜಿ.ಆರ್. ಸಿಂಧ್ಯಾ ಹೇಳಿದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ರಾಜ್ಯ ಸಂಸ್ಥೆ ಹಾಗೂ ಉಡುಪಿ ಜಿಲ್ಲಾ ಸಂಸ್ಥೆಯ ಸಹಯೋಗದಲ್ಲಿ ಕಲ್ಯಾಣಪುರ ಮಿಲಾಗ್ರಿಸ್ ಕಾಲೇಜಿನ ಟ್ರೈ ಸೆಂಟಿನರಿ ಹಾಲ್‌ನಲ್ಲಿ ಶನಿವಾರ ಆಯೋಜಿಸಿದ ರಾಜ್ಯಮಟ್ಟದ ರೇಂಜರಿಂಗ್ ಶತಮಾನೋತ್ಸವ, ರೋವರ್ಸ್ -ರೇಂಜರ್ಸ್ ಮೂಟ್ ಮತ್ತು ರೋವರ್ ಸ್ಕೌಟ್ ಲೀಡರ್ -ರೇಂಜರ್ ಲೀಡರ್‌ಗಳ ಸಮಾವೇಶದಲ್ಲಿ ಅವರು ಮಾತನಾಡಿದರು.
ಹೆಣ್ಣು ಮಕ್ಕಳಿಗೆ ಹೆಚ್ಚಿನ ಆದ್ಯತೆ ನೀಡುವ ನಿಟ್ಟಿನಿಂದ ರೇಂಜರ್ಸ್‌ಗಳ ಸರ್ವಾಂಗೀಣ ಅಭಿವೃದ್ಧಿ ಹಾಗೂ ಸಂಖ್ಯೆಯನ್ನು ಹೆಚ್ಚಿಸಲು ವಿವಿಧ ಕಾರ್ಯಕ್ರಮಗಳನ್ನು ಹಾಕಿಕೊಳ್ಳಲಾಗಿದೆ ಎಂದರು.
ಸಮಾವೇಶವನ್ನು ಉದ್ಘಾಟಿಸಿ ಮಿಲಾಗ್ರಿಸ್ ಶಿಕ್ಷಣ ಸಂಸ್ಥೆಗಳ ಸಂಚಾಲಕ ಲಾರೆನ್ಸ್ ಸಿ. ಡಿಸೋಜ ಮಾತನಾಡಿ, ಪರಿಸ್ಥಿತಿ ಪ್ರತಿಕೂಲವಾಗಿದ್ದರೂ ನಾವು ಅದನ್ನು ಸರಿಪಡಿಸಿಕೊಂಡು ಜೀವನದಲ್ಲಿ ಮುನ್ನಡೆಯಬೇಕು. ಇದೇ ನಮ್ಮ ಧ್ಯೇಯ, ಹಠ, ಸಂಕಲ್ಪ ಆಗಬೇಕು. ಸ್ವಾರ್ಥ ಮನೋಭಾವ ಇಲ್ಲದ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕಬೇಕು. ಪರರಿಗಾಗಿ ದುಡಿಯುವ ಮನಸ್ಸು ನಮ್ಮದಾಗಬೇಕು. ಉತ್ತಮ ಸಮಾಜ ನಿರ್ಮಾಣದಲ್ಲಿ ನಾವೆಲ್ಲರೂ ತೊಡಗಿಕೊಳ್ಳಬೇಕು ಎಂದರು.
ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಮುಖ್ಯ ಆಯುಕ್ತೆ ಶಾಂತ ವಿ. ಆಚಾರ್ಯ, ಗೈಡ್ಸ್ ರಾಜ್ಯ ಜಂಟಿ ಕಾರ್ಯದರ್ಶಿ ಬಿ.ವಿ. ರಾಮಲತಾ, ಶತಮಾನೋತ್ಸವದ ಉಪಾಧ್ಯಕ್ಷರಾದ ಗುಣರತ್ನ, ಜ್ಯೋತಿ ಕೆ. ಹೆಬ್ಬಾರ್, ಜಿಲ್ಲಾ ಗೈಡ್ ಆಯುಕ್ತೆ ಜ್ಯೋತಿ ಜೆ. ಪೈ, ಜಿಲ್ಲಾ ಕಾರ್ಯದರ್ಶಿ ಐ.ಕೆ. ಜಯಚಂದ್ರ ರಾವ್, ಮಂಗಳೂರು ವಿವಿಯ ರೋವರ್ ರೇಂಜರ್ ಸಂಯೋಜಕಿ ಪ್ರೊ. ವಾರಿಜ, ಸ್ಕೌಟ್ಸ್ ಮತ್ತು ಗೈಡ್ಸ್ ಪ್ರಮುಖರಾದ ಜಾನಕಿ ವೇಣುಗೋಪಾಲ್, ಎನ್.ಜಿ. ಮೋಹನ್, ರಾಮಶೇಷ ಶೆಟ್ಟಿ, ಪ್ರಭಾಕರ ಭಟ್, ಪ್ಲೋರಿನ್ ಡಿಸಿಲ್ವ, ವಿಜಯ ಮಾಯಾಡಿ, ಅಶೋಕ್ ಭಟ್, ನಿತಿನ್ ಅಮಿನ್, ವನಿತಾ ರಾವ್ ಉಪಸ್ಥಿತರಿದ್ದರು. ಸ್ಕೌಟ್ಸ್ ಜಿಲ್ಲಾ ಆಯುಕ್ತ ವಿಜಯೇಂದ್ರ ವಸಂತ್ ಸ್ವಾಗತಿಸಿ, ರೇಂಜರ್ ಶತಮಾನೋತ್ಸವ ಸಂಚಾಲಕ ರಾಧಾ ವೆಂಕಟೇಶ್ ಪ್ರಾಸ್ತಾವನೆಗೈದರು.
ರೇಂಜರ್ ಲೀಡರ್ಸ್ ವಿಭಾಗದ ನಾಯಕಿ ಜ್ಯೋತಿ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.
ಸಮಾವೇಶದಲ್ಲಿ 18 ಜಿಲ್ಲೆಗಳಿಂದ 250ಕ್ಕೂ ಹೆಚ್ಚಿನ ರೇಂಜರ್ಸ್ ರೋವರ್ಸ್ ಲೀಡರ್ಸ್ ಭಾಗವಹಿಸಿದ್ದರು.