ಉಡುಪಿ: ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ವಿದ್ಯುತ್ ಸಮಸ್ಯೆಗೆ ಸಂಬಂಧಿಸಿ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಉಡುಪಿ ನಗರಸಭೆ ಕಚೇರಿಯಲ್ಲಿ ಮೆಸ್ಕಾಂ ಅಧಿಕಾರಿಗಳ ಸಭೆ ನಡೆಯಿತು.
ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, ಮಳೆಗಾಲದಲ್ಲಿ ಉಡುಪಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವು ಭಾಗಗಳಲ್ಲಿ ವಿದ್ಯುತ್ ಸಮಸ್ಯೆಯಾಗಿದೆ. ಸಮಸ್ಯೆ ಉಂಟಾದ 24ಗಂಟೆಯೊಳಗೆ ಕ್ರಮ ಜರಗಿಸದಿದ್ದರೆ ಹಲವು ತೊಂದರೆಗಳು ಎದುರಾಗುತ್ತದೆ. ಈ ವಿಚಾರದಲ್ಲಿ ಮೆಸ್ಕಾಂ ಇಲಾಖೆ ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ದೂರಿದರು. ಮುಂದೆ ಕೂಡ ಗಾಳಿಮಳೆ ಆಗುವ ಸಾಧ್ಯತೆ ಇರುವುದರಿಂದ ಮೆಸ್ಕಾಂ ಅಧಿಕಾರಿಗಳು ಇರುವ ವ್ಯವಸ್ಥೆಯಲ್ಲಿ ಉತ್ತಮ ಕಾರ್ಯನಿರ್ವಹಿಸಬೇಕಾಗಿದೆ. ನಗರಸಭೆಯಿಂದ ಇದಕ್ಕೆ ಬೇಕಾದ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದರು.
ಮೆಸ್ಕಾಂ ಅಧೀಕ್ಷಕ ದಿನೇಶ್ ಉಪಾಧ್ಯ ಮಾತನಾಡಿ, ಮಳೆಗಾಲ ಪೂರ್ವದಲ್ಲಿ ಎಪ್ರಿಲ್ ಒಂದರಿಂದ ಮರ ಕಟ್ಟಿಂಗ್, ದುರಸ್ತಿ ಕಾರ್ಯ ಮಾಡಿದ್ದೇವೆ. ಈ ಬಾರಿ ಮಳೆಯಲ್ಲಿ ಗಾಳಿ ಜಾಸ್ತಿ ಬಂದ ಪರಿಣಾಮ ಮರಗಳೇ ಉರುಳಿ ಬಿದ್ದು ಸಾಕಷ್ಟು ಸಮಸ್ಯೆಯಾಗಿದೆ. ಎಪ್ರಿಲ್ನಿಂದ ನಮಗೆ ಹೆಚ್ಚುವರಿ ಸಿಬ್ಬಂದಿ ನೀಡಿರಲಿಲ್ಲ. ಈಗ ಮೇ ತಿಂಗಳಲ್ಲಿ ಉಡುಪಿ ವಿಭಾಗಕ್ಕೆ 55 ಮಂದಿ ತಾತ್ಕಾಲಿಕ ಗ್ಯಾಂಗ್ಮೆನ್ಗಳನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಹೇಳಿದರು.
ಮೆಸ್ಕಾಂನಲ್ಲಿ 450 ಜೂನಿಯರ್ ಪವರ್ಮೆನ್ಗಳ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದ್ದು, ಎರಡು ತಿಂಗಳಲ್ಲಿ ಉಡುಪಿ ಜಿಲ್ಲೆಗೆ 100 ಪವರ್ಮೆನ್ಗಳ ನೇಮಕ ಮಾಡುವ ಸಾಧ್ಯತೆ ಇದೆ. ಖಾಯಂ ಸಿಬ್ಬಂದಿ ನೇಮಕ ಸಂಬಂಧ ಮೇ 27-29ರವರೆಗೆ ಉಡುಪಿಯಲ್ಲಿ ನೇಮಕಾತಿ ಪ್ರಕ್ರಿಯೆ ನಡೆದಿದ್ದು, ಮೆಸ್ಕಾಂಗೆ ಒಟ್ಟು 450 ಮಂದಿಯನ್ನು ನೇಮಕ ಮಾಡಿಕೊಳ್ಳಲು ಕ್ರಮ ತೆಗೆದುಕೊಳ್ಳಲಾಗಿದೆ. ಅದರಲ್ಲಿ 100 ಮಂದಿಯನ್ನು ಉಡುಪಿ ಜಿಲ್ಲೆಗೆ ನೀಡುವ ಸಾಧ್ಯತೆ ಇದೆ ಎಂದರು.
ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಸನ್ನ ಮಾತನಾಡಿ, ಮಳೆಗಾಲದಲ್ಲಿ ತುರ್ತು ಕಾರ್ಯ ನಿರ್ವಹಣೆಗಾಗಿ ನೇಮಕ ಮಾಡಿಕೊಳ್ಳಲಾದ 55 ತಾತ್ಕಾಲಿಕ ಗ್ಯಾಂಗ್ಮೆನ್ಗಳಲ್ಲಿ 10-12 ಮಂದಿ ಯನ್ನು ಉಡುಪಿ, ಮಣಿಪಾಲ, ಬ್ರಹ್ಮಾವರ, ಕಾಪು ಉಪವಿಭಾಗಕ್ಕೆ ನೀಡಲಾಗಿದೆ ಮತ್ತು ಐದು ವಾಹನಗಳನ್ನು ಒದಗಿಸಲಾಗಿದೆ. ಅಲ್ಲದೇ ನಾಲ್ಕು ದೂರವಾಣಿ ಕರೆ ನಿರ್ವಹಣೆ ತಂಡಗಳನ್ನು ನೀಡಲಾಗಿದೆ ಎಂದರು.
ಮೆಸ್ಕಾಂ ಎಕ್ಸಿಕ್ಯೂಟಿವ್ ಇಂಜಿನಿಯರ್ಗಳಾದ ಗಣರಾಜ್ ಭಟ್, ಪ್ರಶಾಂತ್ ಸಭೆಯಲ್ಲಿ ಹಾಜರಿದ್ದು, ಸದಸ್ಯರ ಸಮಸ್ಯೆಗಳಿಗೆ ಪ್ರತಿಕ್ರಿಯಿಸಿದರು. ಸಭೆಯಲ್ಲಿ ನಗರಸಭೆ ಅಧ್ಯಕ್ಷ ಪ್ರಭಾಕರ ಪೂಜಾರಿ, ಉಪಾಧ್ಯಕ್ಷೆ ರಜನಿ ಹೆಬ್ಬಾರ್, ಸ್ಥಾಯಿ ಸಮಿತಿ ಅಧ್ಯಕ್ಷ ಸುಂದರ ಕಲ್ಮಾಡಿ, ಪೌರಾಯುಕ್ತ ಮಹೇಶ್ ಉಪಸ್ಥಿತರಿದ್ದರು.












