ಸದಾ ದೇವರ ಆರಾಧನೆಯಿಂದ ಮನುಷ್ಯನ‌ ಮೋಕ್ಷದ ಹಾದಿ ಸುಗಮ: ಪೂರ್ಣಾಮೃತಾನಂದ ಶ್ರೀ

ಉಡುಪಿ: ಸ್ವಾರ್ಥರಹಿತವಾಗಿ ಭಕ್ತಿ ಶ್ರದ್ಧೆಯಿಂದ ಧಾರ್ಮಿಕ ಚಿಂತನೆಯೊಂದಿಗೆ ದೇವರನ್ನು ಸದಾ ಆರಾಧನೆ ಮಾಡಿದಾಗ ಮಾತ್ರ ಮನುಷ್ಯನಿಗೆ ಮೋಕ್ಷದ ಹಾದಿ ಸುಗಮವಾಗುತ್ತದೆ ಎಂದು ಕೇರಳ ಕೊಲ್ಲಂ ಮಾತಾ ಅಮೃತಾನಂದಮಯಿ ಮಠದ ಪ್ರಧಾನ ಕಾರ್ಯದರ್ಶಿ ಪೂರ್ಣಾಮೃತಾನಂದ ಪುರಿ ಸ್ವಾಮೀಜಿ ಹೇಳಿದರು.
ಉಡುಪಿಯ ಮಾತಾ ಅಮೃತಾನಂದಮಯಿ ಸೇವಾ ಸಮಿತಿ ವತಿಯಿಂದ ಉಡುಪಿ ನಗರದ ಬನ್ನಂಜೆ ನಾರಾಯಣಗುರು ಸಭಾಭವನದಲ್ಲಿ ನಡೆದ ಸತ್ಸಂಗ, ಧ್ಯಾನ, ಭಜನೆಯನ್ನೊಳಗೊಂಡ ಅಮೃತ ವೈಭವ ಧಾರ್ಮಿಕ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ಭಕ್ತಿ ಮಾರ್ಗವನ್ನು ಅನುಸರಿಸುವುದರಿಂದ ಜೀವನದಲ್ಲಿ ಸದಾ ಮಾನಸಿಕ ನೆಮ್ಮದಿಯನ್ನು ಕಂಡುಕೊಳ್ಳಲು ಸಾಧ್ಯವಿದೆ. ಆಧುನಿಕ ಜಂಜಾಟದಲ್ಲಿ ಮುಕ್ತಿಯ ಪಥವನ್ನು ಕಾಣಬೇಕಾದರೆ ನಿಷ್ಕಲ್ಮಶ ಹೃದಯದಿಂದ ಪರಮಾತ್ಮನ ಸ್ಮರಣೆ ಮಾಡಬೇಕಾದುದು ಅನಿವಾರ್ಯ ಎಂದರು.
ಕಾರ್ಯಕ್ರಮಕ್ಕೆ ಮುನ್ನ ಸ್ವಾಮೀಜಿ ಅವರನ್ನು ಪುರ್ಣಕುಂಭ ಸ್ವಾಗತದೊಂದಿಗೆ ಧಾರ್ಮಿಕ ವೇದಿಕೆಗೆ ಕರೆ ತರಲಾಯಿತು. ಸುಮಾರು ಮೂರು ಗಂಟೆಗಳ ಕಾಲ ನಿರಂತರ ಭಜನಾ ಕಾರ್ಯಕ್ರಮ, ಸತ್ಸಂಗ, ಧ್ಯಾನ, ಪೂಜೆ ಮತ್ತು ಪ್ರಸಾದ ವಿತರಣೆ ಕಾರ್ಯಕ್ರಮ ನಡೆಯಿತು. ಇದೇ ವೇಳೆ ಮಾತಾ ಅಮೃತಾನಂದಮಯಿ ಅಮ್ಮನವರ ಪರಮಭಕ್ತರಾದ ಶಿವಪ್ರಸಾದ್‌ ಶೆಟ್ಟಿಗಾರ್‌ ಅವರನ್ನು ಅಭಿನಂದಿಸಲಾಯಿತು.
ಮಂಗಳೂರು ಮಾತಾ ಅಮೃತಾನಂದಮಯಿ ಮಠದ ಮಠಾಧಿಪತಿ ಬ್ರಹ್ಮಚಾರಿಣಿ ಮಂಗಳಾಮೃತ ಚೈತನ್ಯ, ಉಡುಪಿ ಮಾತಾ ಅಮೃತಾನಂದಮಯಿ ಸೇವಾ ಸಮಿತಿಯ ಗೌರವಾಧ್ಯಕ್ಷ ಶ್ರೀಧರ್‌ ಕಿನ್ನಿಮೂಲ್ಕಿ, ಪ್ರಧಾನ ಕಾರ್ಯದರ್ಶಿ ಯೋಗೀಶ್‌ ಕೊಡವೂರು, ಉಪಾಧ್ಯಕ್ಷರಾದ ನವೀನ್‌ ಪಿವಿಟಿ, ಭವಾನಿಶಂಕರ್‌, ಕಿಶೋರ್‌ ಉದ್ಯಾವರ, ಜಂಟಿ ಕಾರ್ಯದರ್ಶಿ ದಯಾನಂದ ಶ್ರೀಯಾನ್‌, ಕೋಶಾಧಿಕಾರಿ ಪದ್ಮನಾಭ ಪುತ್ರನ್‌, ಭಾಸ್ಕರ ಉದ್ಯಾವರ ಉಪಸ್ಥಿತರಿದ್ದರು. ಪ್ರಕಾಶ ಸುವರ್ಣ ಕಟಪಾಡಿ ಕಾರ್ಯಕ್ರಮ ನಿರೂಪಿಸಿದರು.