ಮಾನಸಿಕ ಕಾಯಿಲೆ ದೇವರ ಶಾಪ, ಭೂತಗಳ ಉಪದ್ರದಿಂದ ಬರದು: ಡಾ.ಪಿ.ವಿ.ಭಂಡಾರಿ

ಉಡುಪಿ: ಮೆದುಳಿನಲ್ಲಿ ಆಗುವ ರಾಸಾಯನಿಕ ಬದಲಾವಣೆಗಳಿಂದ ಮನುಷ್ಯನಿಗೆ ಮಾನಸಿಕ ಕಾಯಿಲೆ ಬರುತ್ತದೆಯೇ ಹೊರತು, ಯಾವುದೇ ದೇವರ ಶಾಪ, ಭೂತಗಳ ಉಪದ್ರದಿಂದ ಬರುವುದಿಲ್ಲ ಎಂದು ಮನೋರೋಗ ತಜ್ಞ ಡಾ. ಪಿ.ವಿ. ಭಂಡಾರಿ ಹೇಳಿದರು.
ಬೀಯಿಂಗ್‌ ಸೋಶಿಯಲ್‌ ಹಾಗೂ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಸಹಯೋಗದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ನಡೆದ ಕೂತು ಮಾತನಾಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಾನಸಿಕ ಕಾಯಿಲೆ ಬಗ್ಗೆ ಹಲವಾರು ಅಪನಂಬಿಕೆಗಳಿವೆ. ಇಂದು ಶಿಕ್ಷಣಕ್ಕೂ ಮೂಢನಂಬಿಕೆಗೂ ಹೆಚ್ಚು ವ್ಯತ್ಯಾಸ ಇಲ್ಲ. ಯಾಕೆಂದರೆ ಇಂದು ಶಿಕ್ಷಿತರೇ ಹೆಚ್ಚು ಮೂಢನಂಬಿಕೆಯನ್ನು ಆಚರಿಸುತ್ತಾರೆ. ಆದರೆ, ಮಾನಸಿಕ ಕಾಯಿಲೆಯನ್ನು ವೈಜ್ಞಾನಿಕ ಚಿಕಿತ್ಸೆ ಮೂಲಕ ಗುಣಪಡಿಸಬಹುದೇ ಹೊರತು, ದೇವರ ಪೂಜೆ, ಹರಕೆಗಳಿಂದ ಗುಣಪಡಿಸಲು ಸಾಧ್ಯವಿಲ್ಲ ಎಂದರು.
ಇಂದು ಭಾರತದ ಜನಸಂಖ್ಯೆಗೆ ಅನುಗುಣವಾಗಿ 36 ಸಾವಿರ ಮಾನಸಿಕ ತಜ್ಞರ ಅಗತ್ಯವಿದೆ. ಆದರೆ ಪ್ರಸ್ತುತ ಭಾರತದಲ್ಲಿ ಕೇವಲ 9 ಸಾವಿರ ಮಂದಿ ಮಾತ್ರ ಮಾನಸಿಕ ತಜ್ಞರಿದ್ದಾರೆ. ಅದರಲ್ಲಿ ಸುಮಾರು 6 ಸಾವಿರದಷ್ಟು ವೈದ್ಯರು ಬೃಹತ್‌ ನಗರಗಳಿಗೆ ಸೀಮಿತರಾಗಿದ್ದಾರೆ.
ಇಂಗ್ಲೆಂಡ್‌ ದೇಶದಂತೆ ಮಾನಸಿಕ ತಜ್ಞರಿಗೆ ದಿನಕ್ಕೆ ರೋಗಿಗಳನ್ನು ನಿಗದಿ ಪಡಿಸಿದರೆ, ಭಾರತದಲ್ಲಿ ಹೀಗಿರುವ ತಜ್ಞರಿಗಿಂತ 10ಪಟ್ಟು ಹೆಚ್ಚು ಮಾನಸಿಕ ವೈದ್ಯರ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು. ಅವಿನಾಶ್‌ ಕಾಮತ್‌ ಕಾರ್ಯಕ್ರಮ ನಿರೂಪಿಸಿದರು.
ಮಾನಸಿಕ ಕಾಯಿಲೆ ಬಗ್ಗೆ ಜಾಗೃತಿ ಅಗತ್ಯ
ಮಾನಸಿಕ ರೋಗಿಗಳು ಸಾಮಾನ್ಯರಂತೆ ಇರುತ್ತಾರೆ. ಅವರಿಗೆ ಇರುವ ಕಾಯಿಲೆಗಳನ್ನು ಕೆಲವೊಂದು ಲಕ್ಷಣಗಳಿಂದ ಪತ್ತೆಹಚ್ಚ ಬಹುದಾಗಿದೆ. ಮಧುಮೇಹ, ರಕ್ತದೊತ್ತಡ ಇರುವಂತೆ‌ ಮಾನಸಿಕತೆ ಕೂಡ ಒಂದು ರೀತಿಯ ಕಾಯಿಲೆ. ಆದರೆ ಜನ ಇನ್ನು ಕೂಡ ಆ ಕಾಯಿಲೆಯನ್ನು‌ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದಾರೆ. ವೈದ್ಯರ ಬಳಿ ಕದ್ದುಮುಚ್ಚಿ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನು ದೂರ ಮಾಡುವ ನಿಟ್ಟಿನಲ್ಲಿ ಮಾನಸಿಕ ಕಾಯಿಲೆಯ ಕುರಿತು‌ ಸಾಕಷ್ಟು ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕು ಎಂದು ಹೇಳಿದರು.