ಮಂಗಳೂರು: ನೀರಿಲ್ಲದೇ ಕಂಗೆಟ್ಟಿದ್ದ ಕರಾವಳಿಯಲ್ಲಿ ಕಡೆಗೂ ವರುಣ ದೇವ ಕೃಪೆ ತೋರಿದ್ದಾನೆ. ಅವಿಭಜಿತ ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ನೀರಿಲ್ಲದೇ ಒಣಗಿದ್ದ ನೇತ್ರಾವತಿ ನದಿ ತುಂಬಿ ಹರಿಯುತ್ತಿದೆ.
ಆದರೆ ಕೆಲವೆಡೆ ಮಳೆಯಿಂದಾಗಿ ಗುಡ್ಡ ಕುಸಿದಂತ ಅವಾಂತರ ಸಂಭವಿಸಿದೆ. ಸಮುದ್ರ ಪ್ರಕ್ಷುಬ್ಧಗೊಂಡು ಕಡಲ್ಕೊರೆತ ಉಂಟಾಗಿ ಕಡಲ ತೀರದ ಮನೆಗಳು ಅಪಾಯದ ಅಂಚಿನಲ್ಲಿವೆ.
ಈ ಅತೀಹೆಚ್ಚು ಮಳೆ ಬೀಳುವ ಕರಾವಳಿಯಲ್ಲಿ ಈ ಬಾರಿ ನೀರಿಗಾಗಿ ಆಹಾಕಾರ ಶುರುವಾಗಿತ್ತು. ಶಾಲಾ ಕಾಲೇಜುಗಳಲ್ಲಿ ನೀರಿಲ್ಲದೇ ವಿದ್ಯಾರ್ಥಿಗಳ ಪರದಾಟ, ಪವಿತ್ರ ಪುಣ್ಯಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತರು ನೀರಿಲ್ಲದೇ ದೇವರ ದರ್ಶನವನ್ನು ಮುಂದೂಡುವ ಪರಿಸ್ಥಿತಿ ನಿರ್ಮಾಣ ಉಂಟಾಗಿತ್ತು. ಆದರೆ ಸದ್ಯ ಕರಾವಳಿಯಲ್ಲಿ ನಿರಂತರ ಮಳೆಯಾಗುತ್ತಿದೆ..
ಅಲ್ಲಲ್ಲಿ ಸಮಸ್ಯೆ:
ನಿರಂತರ ಮಳೆಯ ಪರಿಣಾಮ ಮಂಗಳೂರು ನಗರದ ರಸ್ತೆಗಳಲ್ಲಿ ನೀರು ಸರಾಗವಾಗಿ ಹರಿಯುತ್ತಿಲ್ಲ. ವರುಣನ ಆರ್ಭಟದಿಂದ ಕೆಲ ಕಡೆ ಅವಾಂತರಗಳು ಉಂಟಾಗಿದ್ದು, ನಗರದ ಪಡಿಲ್, ಹಾಗೂ ಹೊರವಲಯ ಅಮುಂಜೆ ಎಂಬಲ್ಲಿ ಗುಡ್ಡ ಕುಸಿತದಿಂದ ಕೆಲಕಾಲ ಸಂಚಾರಕ್ಕೂ ತೊಡಕು ಉಂಟಾಗಿದೆ. ನಗರದ ಬಲ್ಮಠ ಬಳಿ ಗೋಡೆ ಮಾದರಿಯ ಗುಡ್ಡ ಕುಸಿದ ಪರಿಣಾಮವಾಗಿ ಸುತ್ತಮುತ್ತಲಿನ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಮನೆ ಮಂದಿ ಸಂಕಷ್ಟ ಎದುರಿಸುವಂತಾಗಿದೆ.
ಸೈಕ್ಲೋನ್ ಹಿನ್ನೆಲೆಯಲ್ಲಿ ಅರಬ್ಬೀ ಸಮುದ್ರ ಪ್ರಕ್ಷುಬ್ಧಗೊಂಡು ಉಳ್ಳಾಲ, ಸೋಮೇಶ್ವರ ಮೊಗವೀರಪಟ್ಣದ ಕಡಲ ತೀರದ ೧೦೦ ಕ್ಕೂ ಹೆಚ್ಚು ಮನೆಗಳು ಕಡಲ್ಕೊರೆತದಿಂದ ಸಂಕಟ ಎದುರಿಸುತ್ತಿದ್ದಾರೆ. ಉಳ್ಳಾಲದಲ್ಲಿ ಎರಡು ಮನೆಗಳು ಈಗಾಗಲೇ ಸಮುದ್ರ ಪಾಲಾಗಿದ್ದು, ಸಮ್ಮರ್ ಸ್ಯಾಂಡ್ನ ಕೆಲ ಭೂಭಾಗ ಕೂಡ ಸಮುದ್ರ ಪಾಲಾಗಿದೆ. ಸಮುದ್ರ ಬದಿಗಳಲ್ಲಿ ಹಾಕಿದ ಕಲ್ಲಿನ ತಡೆಗೋಡೆಗಳನ್ನು ಮೀರಿ ಅಲೆಗಳು ಅಪ್ಪಳಿಸುತ್ತಿವೆ.
ಕಡಲ್ಕೊರೆತ ಉಂಟಾದ ಸ್ಥಳಕ್ಕೆ ಸಂಸದ ನಳಿನ್ ಕುಮಾರ್ ಕಟೀಲು ಅವರು ಭೇಟಿ ನೀಡಿ, ಪರಿಶೀಲನೆ ನಡೆಸಿ ಕೇಂದ್ರ ಸರಕಾರದಿಂದ ಶಾಶ್ವತ ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದ್ದಾರೆ.
ಒಟ್ಟಾರೆಯಾಗಿ ಕರಾವಳಿಯಲ್ಲಿ ಮುಂದಿನ ಕೆಲ ದಿನಗಳ ಕಾಲ ಮಳೆ ಬರುವ ಮುನ್ಸೂಚನೆ ಇದ್ದು, ಸಮುದ್ರ ತೀರಗಳಲ್ಲಿ ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸಲಾಗಿದೆ. ಅಲ್ಲದೇ ಕೆಲವು ದಿನಗಳ ಕಾಲ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಲಾಗಿದೆ. ಕರಾವಳಿಯಲ್ಲಿ ಮೊದಲ ಮಳೆಯ ಜತೆಗೆ ಹವಮಾನ ವೈಪೇರಿತ್ಯದಿಂದ ಸಮಸ್ಯೆಗಳೂ ಎದುರಾಗಿವೆ.