ಮೀನು ಸಾಗಟ ವಾಹನದ ತ್ಯಾಜ್ಯ ನೀರು ವಿಲೇವಾರಿಗೆ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿ ಮನವಿ

ಉಡುಪಿ: ಹಸಿ ಮೀನು ಸಾಗಾಟ ವಾಹನದ ತ್ಯಾಜ್ಯ ನೀರನ್ನು ಸೂಕ್ತ ವಿಲೇವಾರಿ ಮಾಡಲು ಹೆದ್ದಾರಿ ಹಾಗೂ ರಸ್ತೆಯ ಬದಿಯಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಿಕೊಡುವಂತೆ ಒತ್ತಾಯಿಸಿ ಮಂಗಳೂರು ದಕ್ಕೆ ಮೀನು ಲಾರಿ ಚಾಲಕರ ಸಂಘದ ಮೊಹಮ್ಮದ್‌ ಹನೀಫ್‌ ನೇತೃತ್ವದ ನಿಯೋಗವು‌ ಮಂಗಳವಾರ ಉಡುಪಿ ಜಿಲ್ಲಾಧಿಕಾರಿ ಜಿ. ಜಗದೀಶ್‌ ಅವರಿಗೆ ಮನವಿ ಸಲ್ಲಿಸಿತು.
ಬಹುತೇಕ ಮೀನು ಸಾಗಾಟದ ಲಾರಿ ಹಾಗೂ ವಾಹನಗಳಲ್ಲಿ ಮಾಲಿನ್ಯ ನೀರು ಸಂಗ್ರಹವಾಗಲು 200 ರಿಂದ 400ಲೀ. ಸಾಮರ್ಥ್ಯದ ಕಂಟೈನರ್‌ ಜೋಡಿಸಲಾಗಿದೆ. ಆದರೂ ಕೆಲವೊಮ್ಮೆ ಕಂಟೈನರ್‌ ತುಂಬಿ ನೀರು ದಾರಿ ಮಧ್ಯೆದಲ್ಲಿ ಚೆಲ್ಲುತ್ತದೆ. ಈ ಕಾರಣಕ್ಕಾಗಿ ಕೆಲವೊಂದು ಕಡೆಗಳಲ್ಲಿ ಸಾರ್ವಜನಿಕರು ವಾಹನವನ್ನು ತಡೆದು, ವಾಹನ ಜಖಂಗೊಳಿಸಿ ದೈಹಿಕ ಹಲ್ಲೆ
ನಡೆಸಿದ್ದಾರೆ. ಇದರಿಂದ ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ನಿಯೋಗ ತಿಳಿಸಿದೆ.
ರಾಷ್ಟ್ರೀಯ ಹಾಗೂ ರಾಜ್ಯ ಹೆದ್ದಾರಿಯಲ್ಲಿ ಪ್ರತಿ 80 ಕಿ.ಮೀ. ನಲ್ಲಿ ಸಮೀಪದ ಹೊಳೆಗೆ ಮಾಲಿನ್ಯ ನೀರು ಬಿಡುವ ವ್ಯವಸ್ಥೆ ಕಲ್ಪಿಸುವುದು. ಹೊಳೆಯ ಬದಿ ಸ್ಥಳವಿಲ್ಲದೇ ಹೋದರೆ ಇಂಗು ಗುಂಡಿ ಅಥವಾ ಪ್ಲಾಸ್ಟಿಕ್‌ ಬಂಕ್‌ ಮಾಡಿ ಅದಕ್ಕೆ ಮಾಲಿನ್ಯ ನೀರು ಬಿಡುವ ವ್ಯವಸ್ಥೆ ಮಾಡಿಕೊಡುವುದು. ಪ್ರತಿ ಮೀನು ಸಾಗಾಟ ವಾಹನದಿಂದ ನಿರ್ದಿಷ್ಟ ಶುಲ್ಕವನ್ನು ಸಂಗ್ರಹಿಸಿ, ಇದಕ್ಕೆ ತಗಲುವ ವೆಚ್ಚವನ್ನು ಭರಿಸಿಕೊಳ್ಳಬಹುದು. ಇದಕ್ಕೆ ಚಾಲಕರು ಸಂಪೂರ್ಣ ಸಹಕಾರ ನೀಡಲಿದೆ ಎಂದು ಎಂದರು.
ಸಂಘದ ಪ್ರಮುಖರಾದ ಇಬ್ರಾಹಿಂ, ಮೊಹಮ್ಮದ್‌ ಶರೀಫ್‌, ನಜೀರ್‌, ಇಕ್ಬಾಲ್‌, ಆಸೀಫ್‌,‌ ರಾಜೇಶ್‌, ಅನಿಶ್‌, ಫಾರೂಕ್‌, ಮಸೂದ್‌, ಮೊಹಮ್ಮದ್‌ ನಾಸೀರ್‌, ಪ್ರಕಾಶ್‌ ಸಾಸ್ತಾನ, ಸುರೇಶ್‌ ನಿಯೋಗದಲ್ಲಿದ್ದರು.