ಸಾರ್ಥಕ ಬಾಳ್ವೆ ನಡೆಸಲು ಮಾನವ ಹಕ್ಕು ಅವಶ್ಯಕ: ಈಶ್ವರ ಭಟ್

ಉಡುಪಿ: ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಹಕ್ಕನ್ನು ಗೌರವಿಸುವ ಜವಾಬ್ದಾರಿ ಇಡೀ ಸಮಾಜದ ಮೇಲಿದೆ. ಸಾರ್ಥಕ ಬಾಳ್ವೆ ನಡೆಸಲು ಮಾನವ ಹಕ್ಕುಗಳು ಅವಶ್ಯಕ ಎಂದು ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಪಿ. ಈಶ್ವರ ಭಟ್‌ ಹೇಳಿದರು.
ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ವತಿಯಿಂದ ವೈಕುಂಠ ಬಾಳಿಗಾ ಕಾನೂನು ಕಾಲೇಜಿನಲ್ಲಿ ಶುಕ್ರವಾರ ಆಯೋಜಿಸಿದ ಮಾನವ ಹಕ್ಕುಗಳ ಮೇಲಿನ ಒಂದು ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇಂದು ಹಲವಾರು ದೇಶಗಳು ಸಂವಿಧಾನದಲ್ಲಿ ವಿವಿಧ ಮಾನವ ಹಕ್ಕುಗಳನ್ನು ಅಳವಡಿಸಿಕೊಂಡಿದ್ದು, ಮಾನವನ ಸರ್ವಾಂಗೀಣ ಅಭಿವೃದ್ಧಿಗೆ ಪೂರಕವಾಗಿರುವ ಈ ಹಕ್ಕುಗಳ ಅನುಷ್ಠಾನಕ್ಕೆ ಕಾಲ ಪಕ್ವವಾಗಿದೆ ಎಂದರು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಪ್ರಕಾಶ್‌ ಕಣಿವೆ ಮಾತನಾಡಿ, ಮಾನವ ಹಕ್ಕುಗಳ ರಕ್ಷಣೆ ಹಾಗೂ ಅನುಷ್ಟಾನಕ್ಕೆ ನ್ಯಾಯಾಲಯಗಳು ಪೂರಕವಾಗಿ ಸ್ಪಂದಿಸುತ್ತಿದೆ. ಆದರೆ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ಕೊರತೆಯಿದ್ದು, ಜಾಗೃತಿ ಮೂಡಿಸುವ ಅಗತ್ಯವಿದೆ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಮಾನವ ಹಕ್ಕುಗಳ ಬಗ್ಗೆ ಸಂವೇದನಾ ಶೀಲತೆಯನ್ನು
ಬೆಳೆಸಿಕೊಂಡಲ್ಲಿ ಸ್ವಸ್ಥ ಸಮಾಜವನ್ನು ಕಟ್ಟಬಹುದು ಎಂದರು.
ಕಾರ್ಯಕ್ರಮ ಸಂಯೋಜಕ ಕೆ.ಎಸ್‌. ರಘುನಾಥ್‌ ಸ್ವಾಗತಿಸಿದರು. ಉಪನ್ಯಾಸಕಿ ಪ್ರೀತಿ ಹರೀಶ್‌ರಾಜ್‌ ವಂದಿಸಿದರು. ಶ್ರೀಲಕ್ಷ್ಮೀ ಕಾರ್ಯಕ್ರಮ ನಿರೂಪಿಸಿದರು.
ಬಳಿಕ ನಡೆದ ತಾಂತ್ರಿಕ ಕಲಾಪಗಳಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯದ ಡೀನ್‌ ಡಾ. ಸಿ.ಎಸ್‌. ಪಾಟೀಲ್‌, ಮಂಗಳೂರು ವಿಶ್ವವಿದ್ಯಾಲಯದ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ.ಎಲ್‌. ಧರ್ಮ ಹಾಗೂ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್‌ ಪ್ರಬಂಧ ಮಂಡಿಸಿದರು.