ಕ್ವಾರಂಟೈನ್ ನಲ್ಲಿದ್ದ ವ್ಯಕ್ತಿ ಮಣಿಪಾಲ ಕೆಎಂಸಿಯಲ್ಲಿ ಸಾವು: ಕೊರೊನಾ ಶಂಕೆ

ಉಡುಪಿ: ಕ್ವಾರಂಟೈನ್ ನಲ್ಲಿ ಇದ್ದ ಕುಂದಾಪುರ ತಾಲ್ಲೂಕಿನ ವ್ಯಕ್ತಿಯೊಬ್ಬರು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.
ಮೃತ ವ್ಯಕ್ತಿ ಕೊರೊನಾ ಸೋಂಕಿನಿಂದಲೇ ಮೃತಪಟ್ಟಿದ್ದಾರೆಯೇ ಎನ್ನುವುದು ಖಚಿತಗೊಂಡಿಲ್ಲ. ಕೊರೊನಾ ಶಂಕೆಯ ಹಿನ್ನೆಲೆಯಲ್ಲಿ ವ್ಯಕ್ತಿಯ ಗಂಟಲಿನ ಮಾದರಿಯನ್ನು‌ ಪರೀಕ್ಷೆಗಾಗಿ ಮಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಅದರ ವರದಿಗಾಗಿ ನಿರೀಕ್ಷೆ ಮಾಡಲಾಗುತ್ತಿದೆ ಎಂದು ಆರೋಗ್ಯ ಇಲಾಖೆಯ ಮೂಲಗಳು ತಿಳಿಸಿವೆ.
ಈ ವ್ಯಕ್ತಿ ಮೇ 5ರ ಬಳಿಕ
ಮಹಾರಾಷ್ಟ್ರದಿಂದ ತನ್ನ ಹುಟ್ಟೂರಾದ ಕುಂದಾಪುರ ತಾಲೂಕಿಗೆ ಆಗಮಿಸಿದ್ದರು. ಕ್ವಾರಂಟೈನ್ ನಲ್ಲಿ ಇದ್ದ ಇವರು ಅಸ್ವಸ್ಥಗೊಂಡಿದ್ದು, ಕುಂದಾಪುರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅನಾರೋಗ್ಯ ತೀವ್ರಗೊಂಡ ಹಿನ್ನೆಲೆಯಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೃತ ವ್ಯಕ್ತಿಗೆ ಕೊರೊನಾ ಶಂಕೆ ಇರುವ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಹಾಗೂ ನರ್ಸ್ ಗಳನ್ನು‌ ಕ್ವಾರಂಟೈನ್ ಮಾಡಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ. ಸಂಜೆ ಮೃತ ವ್ಯಕ್ತಿಯ ವರದಿ ವೈದ್ಯರ ಕೈ ಸೇರಲಿದ್ದು, ಆ ಬಳಿಕವೇ ವ್ಯಕ್ತಿ ಸಾವಿಗೆ ನಿಖರ ಕಾರಣ ತಿಳಿದುಬರಲಿದೆ ಎನ್ನಲಾಗುತ್ತಿದೆ.