ಉಡುಪಿ:IND-PAK WAR:ಮಲ್ಪೆಯಲ್ಲಿ ಮೊಳಗಿದ ಸೈರನ್‌.!

ಉಡುಪಿ: ಭಾರತ-ಪಾಕಿಸ್ಥಾನ ನಡುವಿನ ಯುದ್ಧಭೀತಿಯ ಮುನ್ನೆಚ್ಚರಿಕೆ ಕ್ರಮವಾಗಿ ಮಲ್ಪೆಯ ಬಾಪುತೋಟದಲ್ಲಿರುವ ಉಡುಪಿ ಕೊಚ್ಚಿನ್‌ ಶಿಪ್‌ಯಾರ್ಡ್‌ನಲ್ಲಿ ಅಗ್ನಿಶಾಮಕ ದಳದಿಂದ ನಾಗರಿಕ ರಕ್ಷಣಾ ಅಣಕು ಕಾರ್ಯಾಚರಣೆ ನಡೆಸಲಾಯಿತು.

ಸಂಜೆ ಸುಮಾರು 4 ರ ವೇಳೆಗೆ ಸಂಸ್ಥೆಯ ಸೈರನ್‌ ಮೊಳಗತೊಡಗಿದ್ದು, ಕೂಡಲೇ ಅಗ್ನಿಶಾಮಕ ದಳದವರು ಆಗಮಿಸಿ ವಿದ್ಯುತ್‌ ಹಾಗೂ ಗ್ಯಾಸ್‌ ಸಂಪರ್ಕವನ್ನು ಕಡಿತಗೊಳಿಸಿದರು. ಕರ್ತವ್ಯ ನಿರತರಾಗಿದ್ದವರನ್ನು ಕೂಡಲೇ ಸುರಕ್ಷಿತ ಸ್ಥಳಕ್ಕೆ ರವಾನಿಸಿ ಎಷ್ಟು ಮಂದಿ ಇದ್ದಾರೆ ಎಂಬ ಮಾಹಿತಿ ಪಡೆದು ಉಳಿದವರಿಗೆ ಒಳಭಾಗದಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಅವರನ್ನು ಪತ್ತೆ ಹಚ್ಚಲಾಯಿತು. ಕಂಪೆನಿಯ ಎಲ್ಲ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಅನಂತರ 4.30ರ ಬಳಿಕ ಮತ್ತೆ ಕಾರ್ಯಾರಂಭ ಮಾಡಲಾಯಿತು. ಅಗ್ನಿಶಾಮಕ ದಳದ ಸಿಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು. ಅಗತ್ಯ ಇರುವ ಕಡೆಗಳಲ್ಲಿ ಇಂತಹ ಕಾರ್ಯಾಚರಣೆಗಳನ್ನು ನಡೆಸಲಾಗುತ್ತಿದೆ ಎಂದು ಜಿಲ್ಲಾ ಅಗ್ನಿಶಾಮಕದಳದ ಅಧಿಕಾರಿ ವಿನಾಯಕ ಕಲ್ಗುಟ್ಕರ್‌ ತಿಳಿಸಿದ್ದಾರೆ.

ದೇಶಾದ್ಯಂತ ಯುದ್ಧದ ಕಾರ್ಮೋಡ ಹಬ್ಬಿದ್ದು, ಕರಾವಳಿಯ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯ ಮೂಲಕ ಗಸ್ತು ಕಾರ್ಯಾಚರಣೆಯನ್ನು ಹೆಚ್ಚಿಸಲಾಗಿದೆ. ರಾಜ್ಯದಲ್ಲಿ ಒಟ್ಟು 50 ಬೀಚ್‌ ಪಾಯಿಂಟ್‌ಗಳನ್ನು ಗುರುತಿಸಲಾಗಿದ್ದು, ಸಣ್ಣಪುಟ್ಟ ಬೋಟ್‌ಗಳು ಸಹಿತ ಸಮುದ್ರ ತೀರಕ್ಕೆ ಆಗಮಿಸುವ ಎಲ್ಲ ತರಹದ ದೋಣಿಗಳನ್ನು ಪರಿಶೀಲಿಸಲಾಗುತ್ತಿದೆ.