ಉಡುಪಿ: ಮಹಿಳಾ ಸ್ವ ಸಹಾಯ ಸಂಘಗಳಿಗೆ ಮಹಾಲಕ್ಷ್ಮಿ ಬ್ಯಾಂಕ್ ಮುಖಾಂತರ ಮಂಜೂರುಗೊಂಡು ಶೂನ್ಯ ಬಡ್ಡಿದರದಲ್ಲಿ ಸಾಲ ಯೋಜನೆಯ ಚೆಕ್ ವಿತರಣಾ ಕಾರ್ಯಕ್ರಮ ಸೋಮವಾರ ಬ್ಯಾಂಕ್ ನ ಮಲ್ಪೆ ಶಾಖೆಯಲ್ಲಿ ನಡೆಯಿತು.
ಶಾಸಕ ಕೆ. ರಘುಪತಿ ಭಟ್ ಸಾಲದ ಚೆಕ್‌ನ್ನು ವಿತರಿಸಿ ಶುಭ ಹಾರೈಸಿದರು. ಮಲ್ಪೆ ಶಾಖೆಯಿಂದ ೧೯೪ ಮಹಿಳಾ ಸದಸ್ಯರ ಸುಮಾರು ೩೧ ಸ್ವಸಹಾಯ ಗುಂಪುಗಳಿಗೆ ೧.೫ ಕೋ.ರೂ. ಸಾಲವನ್ನು ವಿತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಬ್ಯಾಂಕಿನ ಅಧ್ಯಕ್ಷ ಯಶ್‌ಪಾಲ್ ಎ. ಸುವರ್ಣ ಅವರು, ಬ್ಯಾಂಕ್ ಮೂಲಕ ಮಹಿಳಾ ಗುಂಪುಗಳಿಗೆ ಈವರೆಗೆ ೩.೫ ಕೋ. ರೂ. ಬಡ್ಡಿ ಸಾಲವನ್ನು ನೀಡಲಾಗಿದ್ದು. ಇನ್ನುಳಿದ ಗುಂಪುಗಳಗೆ ಮುಂದಿನ ದಿನಗಳಲ್ಲಿ ವಿತರಿಸಲಾಗುವುದು ಎಂದರು.
ನಗರಸಭಾ ಸದಸ್ಯರಾದ ಲಕ್ಷ್ಮೀ ಮಂಜುನಾಥ್, ವಿಜಯ ಕೊಡವೂರು, ಸುಂದರ ಜೆ. ಕಲ್ಮಾಡಿ, ತಾ.ಪಂ. ಸದಸ್ಯ ಶರತ್ ಬಲಕರೆ, ಮಹಿಳಾ ಮೀನುಗಾರರ ಸಂಘದ ಜಲಜ ಕೋಟ್ಯಾನ್, ಬ್ಯಾಂಕಿನ ಉಪಾಧ್ಯಕ್ಷ ಮಾದವ ಸುವರ್ಣ ನಿರ್ದೇಶಕರಾದ ವಿನಯ ಕರ್ಕೇರ, ಎನ್. ಟಿ. ಅಮೀನ್, ವಾಸುದೇವ ಸಾಲ್ಯಾನ್, ರಾಮದಾಸ್ ಶ್ರೀಯಾನ್, ಸುರೇಶ್ ಬಿ. ಕರ್ಕೇರ, ವನಜ ಹೆಚ್. ಕಿದಿಯೂರು, ವನಜ ಜೆ. ಪುತ್ರನ್, ಶಿವರಾಮ ಕುಂದರ್ ಮೊದಲಾದವರು ಉಪಸ್ಥಿತರಿದ್ದರು.
ಬ್ಯಾಂಕಿನ ಶಾಖಾ ಪ್ರಭಂದಕ ಕೆ. ಸುಬ್ಬಣ್ಣ ಸ್ವಾಗತಿಸಿದರು. ಸಿಬಂದಿ ಹರಿನಾಥ ಸುವರ್ಣ ಅವರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.