ನಾಡದೋಣಿ ಮೀನುಗಾರಿಕೆಯನ್ನು ಆಗಸ್ಟ್ 30ರ ವರೆಗೆ ವಿಸ್ತರಿಸಿ: ಮೀನುಗಾರರ ಆಗ್ರಹ

ಮಲ್ಪೆ: ಮಳೆಗಾಲ ಋತುವಿನ ನಾಡದೋಣಿ ಮೀನುಗಾರಿಕೆಯ ಅವಧಿಯನ್ನು ಒಂದು ತಿಂಗಳು ವಿಸ್ತರಿಸುವಂತೆ ಮಲ್ಪೆ ಸಾಂಪ್ರಾದಾಯಿಕ ನಾಡದೋಣಿ ಸಂಘ, ನಾಡಟ್ರಾಲ್‌ದೋಣಿ ಸಂಘ ಹಾಗೂ ಸಾಂಪ್ರಾದಾಯಿಕ ಕಂತು ಬಲೆ ದೋಣಿ ಸಂಘ ಆಗ್ರಹಿಸಿದೆ.
ನಾಡದೋಣಿ ಮೀನುಗಾರರ ನಿಯೋಗವು ಮೀನುಗಾರಿಕೆ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕೆ. ರಘುಪತಿ ಭಟ್‌, ಜಿಲ್ಲಾಧಿಕಾರಿ ಜಿ. ಜಗದೀಶ್‌, ಮೀನುಗಾರಿಕಾ ಜಂಟಿ ನಿರ್ದೇಶಕ, ಮೀನುಗಾರಿಕಾ ಸಹಾಯಕ ನಿರ್ದೇಶಕರು, ಮಲ್ಪೆ ಮೀನುಗಾರರ ಸಂಘ ಮತ್ತು ಆಳಸಮುದ್ರ ತಾಂಡೇಲರ ಸಂಘಕ್ಕೆ ಮನವಿ ನೀಡಿ ಒತ್ತಾಯಿಸಿದೆ.
ಈ ಹಿಂದೆ ಮಳೆಗಾಲ ಋತುವಿನ ಮೀನುಗಾರಿಕೆಗೆ ಮೂರು ತಿಂಗಳ ಅವಧಿಯನ್ನು ನೀಡಲಾಗುತ್ತಿತ್ತು. ಆದರೆ ಇತ್ತೀಚಿನ 3 ವರ್ಷದಿಂದ ಅದನ್ನು 2 ತಿಂಗಳಿಗೆ ಕಡಿತಗೊಳಿಸಲಾಗಿದೆ. ಮಳೆಗಾಳಿ ಹಾಗೂ ಹವಾಮಾನದಲ್ಲಿ ಹೆಚ್ಚು ವೈಪರೀತ್ಯತೆ ಉಂಟಾಗುವುದರಿಂದ ಈ ಎರಡು ತಿಂಗಳ ಅವಧಿಯಲ್ಲಿ ಹೆಚ್ಚು ಮೀನುಗಾರಿಕೆ ನಡೆಸಲು ಸಾಧ್ಯವಾಗುವುದಿಲ್ಲ. ಪ್ರಸಕ್ತ ಋತುವಿನಲ್ಲಿ ಈವರೆಗೂ ಮೀನುಗಾರಿಕೆಯಲ್ಲಿ ಹೆಚ್ಚಿನ ಸಂಪಾದನೆ ಆಗಿಲ್ಲ. ಇದರಿಂದ ಈ ಮೂರು ಸಂಘದ ಅಡಿಯಲ್ಲಿ ಬರುವ 5 ಸಾವಿರ ಮೀನುಗಾರರು ಕಷ್ಟದಲ್ಲಿ ದಿನ ದೂಡುವಂತಾಗಿದೆ. ಮೀನುಗಾರರ ಕುಟುಂಬದ ಜೀವನ ನಿರ್ವಹಣೆ ಬಹಳಷ್ಟು ಕಷ್ಟದಾಯಕವಾಗಿದೆ. ಆದ್ದರಿಂದ ಈ ಮಳೆಗಾಲದ ಋತುವಿನಲ್ಲಿ ನಾಡದೋಣಿ ಮೀನುಗಾರಿಕೆಗೆ ಹಿಂದಿನಂತೆ ಆ. 30ರವರೆಗೆ ಅವಧಿಯನ್ನು ವಿಸ್ತರಿಸಬೇಕು ಮತ್ತು ಯಾಂತ್ರಿಕ ಮೀನುಗಾರಿಕೆಗೆ ಸೆ. 1ರಿಂದ ಅವಕಾಶವನ್ನು ನೀಡಬೇಕು ಎಂದು ನಿಯೋಗವು ಮನವಿಯಲ್ಲಿ ಆಗ್ರಹಿಸಿದೆ.
ಈ ಸಂದರ್ಭದಲ್ಲಿ ನಾಡದೋಣಿ ಅಧ್ಯಕ್ಷ ಜನಾರ್ದನ ತಿಂಗಳಾಯ, ಟ್ರಾಲ್‌ದೋಣಿ ಅಧ್ಯಕ್ಷ ದೇವದಾಸ್‌ ಕುಂದರ್‌, ಉಪಾಧ್ಯಕ್ಷ ಮಧುಸೂದನ್‌ ಮೈಂದನ್‌, ಕಾರ್ಯದರ್ಶಿ ಪುರಂದರ್‌ ಕೋಟ್ಯಾನ್‌, ಕೋಶಾಧಿಕಾರಿ ಆನಂದ ಕಾಂಚನ್‌, ಕಂತುಬಲೆ ದೋಣಿ ಸಂಘದ ಅಧ್ಯಕ್ಷ ಸತೀಶ್‌ ಕುಂದರ್‌, ಸದಸ್ಯರಾದ ಗಣಪ ಕೋಡಿ, ಕರುಣಾಕರ್‌ ಮೆಂಡನ್‌, ವಿನೋದ್‌ ಕುಂದರ್‌, ತಾರಾನಾಥ್‌ ಸಾಲ್ಯಾನ್‌ ಮೊದಲಾದವರು ಇದ್ದರು.