ಉಡುಪಿ: ಶಬರಿಮಲೆ ದೇಗುಲದ ಪಾವಿತ್ರ್ಯತೆಯನ್ನು ಕಾಪಾಡುವ ದೃಷ್ಟಿಯಿಂದ ಮಕರ ಸಂಕ್ರಮಣದ ಅಂಗವಾಗಿ ಉಡುಪಿ ನಗರದ ಮುಖ್ಯ ರಸ್ತೆಗಳಲ್ಲಿ ನೂರಾರು ದೀಪಗಳನ್ನು ಬೆಳಗಿಸುವ ಕಾರ್ಯಕ್ರಮ ‘ಧರ್ಮ ರಕ್ಷ ಜ್ವಾಲಾ’ ಅನ್ನು ಜ. 14ರಂದು ಸಂಜೆ 6.20ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಧರ್ಮ ಫೌಂಡೇಶನ್ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್ ತಿಳಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಕರ ಸಂಕ್ರಮಣದಂದು ಶಬರಿಮಲೆ ಸ್ವಾಮಿ ಅಯ್ಯಪ್ಪನ ಕ್ಷೇತ್ರದಲ್ಲಿ ಸಂಜೆ 6.42 ಕ್ಕೆ ಮಕರ ಜ್ಯೋತಿ ಬೆಳಗಲಿದೆ. ಪಂದಳ ರಾಜನ ಆದೇಶದಂತೆ ಮತ್ತು ಧರ್ಮ ಫೌಂಡೇಶನ್ನ ವತಿಯಿಂದ ದೇಶದಾದ್ಯಂತ ಕೋಟಿ ಕೋಟಿ ದೀಪ ಹಚ್ಚುವ ಈ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಅಂದು ಸಂಜೆ 6.20 ರಿಂದ ಸಂಜೆ 7 ಗಂಟೆವರೆಗೆ 40 ನಿಮಿಷಗಳ ಉಡುಪಿ ಮಲ್ಪೆ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಮುಂಭಾಗ ಸೇರಿದಂತೆ ನಗರದ ಎಲ್ಲಾ ವಾರ್ಡ್ಗಳಲ್ಲಿ ನಗರಸಭಾ ಸದಸ್ಯರ ನೇತೃತ್ವದಲ್ಲಿ ಆಯ್ದ ದೇವಸ್ಥಾನ ಮತ್ತು ಮುಖ್ಯ ರಸ್ತೆಗಳಲ್ಲಿ ಅಯ್ಯಪ್ಪ ಜ್ಯೋತಿ ಕಾರ್ಯಕ್ರಮ ನೆರವೇರಲಿದೆ. ಇದಕ್ಕೆ ಊರಿನ ಪ್ರತಿಯೊಬ್ಬರೂ ಭಕ್ತರು ಕೈ ಜೋಡಿಸುವಂತೆ ಮನವಿ ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಧರ್ಮ ಫೌಂಡೇಶನ್ ಟ್ರಸ್ಟ್ ಸದಸ್ಯ ಗಿರೀಶ್ ಜಿ.ಎನ್., ನಗರ ಸಭಾ ಸದಸ್ಯ ಪ್ರಭಾಕರ್ ಪೂಜಾರಿ, ಸಂಘಟಕ ಕೆ. ರಾಘವೇಂದ್ರ ಕಿಣಿ ಉಪಸ್ಥಿತರಿದ್ದರು.