ಉಡುಪಿ: ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವುದರ ಜತೆಗೆ ಸಂಸ್ಥೆಯ ಉನ್ನತಿಗೆ ಸಿಬ್ಬಂದಿ ಮುತುವರ್ಜಿಯಿಂದ ಶ್ರಮವಹಿಸಿದರೆ ಸಂಸ್ಥೆ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯವಿದೆ ಎಂದು ಅಂಬಲಪಾಡಿ ಡಾ. ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ. ಜಿ ಶಂಕರ್ ಹೇಳಿದರು.
ಅವರು ಶನಿವಾರ ನಗರದ ಶೇಷಶಯನ ಸಭಾಂಗಣದಲ್ಲಿ ನಡೆದ ಉಡುಪಿ ಮಹಾಲಕ್ಷ್ಮೀ ಕೋ ಆಪರೇಟಿವ ಬ್ಯಾಂಕ್ ನ ಗ್ರಾಹಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಯಶ್ ಪಾಲ್ ಸುವರ್ಣ ಅವರ ನೇತೃತ್ವದಲ್ಲಿ ಅವರ ಹಾಗೂ ನಿರ್ದೇಶಕರುಗಳ ಶ್ರಮದ ಫಲವಾಗಿ ಬ್ಯಾಂಕ್ ಇಂದು ಉನ್ನತ ಮಟ್ಟಕ್ಕೇರಿದ್ದು ಉತ್ತಮ ಲಾಭದತ್ತ ಸಾಗಿದೆ. ಯಶ್ ಪಾಲ್ ಅವರು ಉತ್ತಮ ನಾಯಕತ್ವ ಗುಣ ಹೊಂದಿದ್ದು ಮೀನುಗಾರಿಕಾ ಫೆಡರೇಶನ್ ಮತ್ತು ಬ್ಯಾಂಕ್ ಎರಡನ್ನು ಅಭಿವೃದ್ಧಿ ಪಥದಲ್ಲಿ ಕೊಂಡೊಯ್ಯುತ್ತಿದ್ದು ಅವರ ಕನಸಿಗೆ ಸಿಬ್ಬಂದಿ ವರ್ಗ ಕೈಜೋಡಿಸಿದಾಗ ಇನ್ನಷ್ಟು ಯಶಸ್ಸು ಸಾಧ್ಯ ಎಂದರು.
ಬ್ಯಾಂಕಿನ ಅಧ್ಯಕ್ಷರಾದ ಯಶ್‍ಪಾಲ್ ಸುವರ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಸಹಕಾರಿ ಇಲಾಖೆ ಹಾಗೂ ಭಾರತೀಯ ರಿಸರ್ವ್ ಬ್ಯಾಂಕಿನ ಪರಿವೀಕ್ಷಣೆಗೆ ಒಳಪಟ್ಟಿದ್ದು, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 8 ಶಾಖೆಗಳ ಮೂಲಕ ವ್ಯವಹಾರ ನಡೆಸುತ್ತಿದೆ. ಬ್ಯಾಂಕ್ ಪ್ರಸ್ತುತ 347 ಕೋಟಿ ಠೇವಣಿ ಹಾಗೂ 265 ಕೋಟಿ ಸಾಲ ಮತ್ತು ಮುಂಗಡದೊಂದಿಗೆ 605 ಕೋಟಿ ವ್ಯವಹಾರ ನಡೆಸಿದ್ದು, ಕಳೆದ 13 ವರ್ಷಗಳಿಂದ ಸದಸ್ಯರಿಗೆ ಶೇ. 18 ಡಿವಿಡೆಂಡ್ ನೀಡುತ್ತಿರುವ ಮೂಲಕ ಕರಾವಳಿ ಭಾಗದ ಏಕೈಕ ಪಟ್ಟಣ ಸಹಕಾರಿ ಬ್ಯಾಂಕ್ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಮಾಂಡವಿ ರಿಯಲ್ ಎಸ್ಟೇಟ್ ಡೆವಲಪರ್ಸ್ ಆಡಳಿತ ನಿರ್ದೇಶಕ ಜೆರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಪುರುಷೋತ್ತಮ ಶೆಟ್ಟಿ, ಕಿದಿಯೂರು ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಭುವನೇಂದ್ರ ಕಿದಿಯೂರು, ಉಪ್ಪುಂದ ವರಲಕ್ಷ್ಮೀ ಚಾರಿಟೇಬಲ್ ಟ್ರಸ್ಟ್ ನ ಪ್ರವರ್ತಕ ಗೋವಿಂದ ಬಾಬು ಪೂಜಾರಿ, ಸಾಯಿರಾಧಾ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಮನೋಹರ್ ಎಸ್. ಶೆಟ್ಟಿ, ಲಕ್ಷ್ಮೀ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಬಿ. ಎನ್. ಶಂಕರ ಪೂಜಾರಿ, ಯಶಸ್ವಿ ಫಿಶ್ ಮೀಲ್ & ಆಯಿಲ್ ಕಂ. ಆಡಳಿತ ನಿರ್ದೇಶಕ ಸಾಧು ಸಾಲ್ಯಾನ್, ಮತ್ಸ್ಯೋದ್ಯಮಿ ಆನಂದ ಪಿ. ಸುವರ್ಣ, ಕಾರ್ತಿಕ್ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಹರಿಯಪ್ಪ ಕೋಟ್ಯಾನ್, ಕಾಂಚನ್ & ಕಂ. ಲೆಕ್ಕಪರಿಶೋಧಕರಾದ ಗಣೇಶ್ ಬಿ. ಕಾಂಚನ್ ಉಪಸ್ಥಿತರಿದ್ದರು.
ಬ್ಯಾಂಕ್ ಉದ್ಯೋಗಿ ವಿಜೇತ ಶೆಟ್ಟಿ ಹಾಗೂ ಸತೀಶ್ ಚಿತ್ರಪಾಡಿ ಕಾರ್ಯಕ್ರಮ ನಿರೂಪಿಸಿದರು.