ಉಡುಪಿ: ಚುನಾವಣಾ ಆಯೋಗವು ಸಾರ್ವತ್ರಿಕ ಲೋಕಸಭಾ ಚುನಾವಣೆ 2019 ಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲೆಯಲ್ಲಿ ಏಪ್ರಿಲ್ 18 ರಂದು ಮತದಾನ ನಡೆಸಲು ಚುನಾವಣೆ ವೇಳಾಪಟ್ಟಿಯನ್ನು ಘೋಷಿಸಿದೆ. ಈ ಸಂದರ್ಭದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಶಾಂತಿ ಪಾಲನೆ, ಕಾನೂನು ಸುವ್ಯವಸ್ಥೆ ಮತ್ತು ಸುರಕ್ಷತೆಯನ್ನು ಕಾಪಾಡುವ ನಿಟ್ಟಿನಲ್ಲಿ ಹಾಗೂ ಚುನಾವಣಾ ಕಾರ್ಯಗಳು ಮುಕ್ತ ಹಾಗೂ ನ್ಯಾಯಸಮ್ಮತವಾಗಿ ಶಾಂತಿಯುತ ವಾತಾವರಣದಲ್ಲಿ ನಡೆಸಲು ಅನುಕೂಲವಾಗುವಂತೆ ಮತದಾನ ಪ್ರಾರಂಭವಾಗುವ ದಿನಾಂಕದ 48 ಗಂಟೆಗಳ ಮುಂಚಿತವಾಗಿ ಅಂದರೆ ಎಪ್ರಿಲ್ 16 ರಂದು ಸಂಜೆ 6 ರಿಂದ ಮತದಾನದ ದಿನ ಅಂದರೆ ಎಪ್ರಿಲ್ 18 ರ ಮಧ್ಯರಾತ್ರಿ 12 ರ ವರೆಗೆ ಉಡುಪಿ ಜಿಲ್ಲೆಯಾದ್ಯಂತ ಎಲ್ಲಾ ರೀತಿಯ ಮದ್ಯದಂಗಡಿಗಳನ್ನು, ಮದ್ಯ ಮಾರಾಟ ಡಿಪೋಗಳನ್ನು, ಮದ್ಯ ತಯಾರಿಕಾ ಡಿಸ್ಟಿಲರಿಗಳನ್ನು, ಸ್ಟಾರ್ ಹೋಟೆಲ್‍ಗಳನ್ನು, ಶೇಂದಿ ಅಂಗಡಿಗಳನ್ನು ಮುಚ್ಚುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಆದೇಶ ಹೊರಡಿಸಿರುತ್ತಾರೆ.
ಈ ಆದೇಶದಂತೆ ಸೂಚಿಸಿರುವ ದಿನಗಳಲ್ಲಿ ಜಿಲ್ಲೆಯಾದ್ಯಂತ ಯಾವುದೇ ಹೋಟೆಲ್‍ಗಳಲ್ಲಿ, ಕ್ಲಬ್‍ಗಳಲ್ಲಿ ಹಾಗೂ ಶೇಂದಿ ಅಂಗಡಿಗಳಲ್ಲಿ ಮದ್ಯ ಮಾರಾಟ / ಸರಬರಾಜು ಮಾಡುವುದನ್ನು ನಿಷೇಧಿಸುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.