ಉಡುಪಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ದಾರಿ ದೀಪದ ಬದಲು ದೊಂದಿ ಬೆಳಕು: ಕರ್ನಾಟಕ ರಕ್ಷಣಾ ವೇದಿಕೆಯಿಂದ ವಿಭಿನ್ನ ಪ್ರತಿಭಟನೆ

ಉಡುಪಿ: ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ರಾಷ್ಟ್ರೀಯ ಹೆದ್ದಾರಿ 66 ರ ರಸ್ತೆಯ ಕೆಟ್ಟು ಹೋಗಿರುವ ದಾರಿ ದೀಪಗಳನ್ನು ಶೀಘ್ರವೇ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಉಡುಪಿ ನಾಗರಿಕರು ಭಾನುವಾರ ರಾತ್ರಿ ದೊಂದಿ ಹಾಗೂ ಚಿಮಣಿ ಬೆಳಕು ಉರಿಸುವ ಮೂಲಕ ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದರು.

ಇದೇ ಸಂದರ್ಭದಲ್ಲಿ ದಾರಿ ದೀಪಗಳನ್ನು ಸರಿಪಡಿಸುವವರೆಗೆ ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗೆ ದೊಂದಿ ಅಥವಾ ಚಿಮಣಿ ದೀಪ ಅಳವಡಿಸಿ ಪಾದಚಾರಿಗಳಿಗೆ ಬೆಳಕು ನೀಡುವ ವಿಭಿನ್ನ ಪ್ರತಿಭಟನೆಗೆ ಚಾಲನೆ ನೀಡಲಾಯಿತು.

ಕರಾವಳಿ ಬೈಪಾಸ್ ನಿಂದ ಅಂಬಾಗಿಲು ಜಂಕ್ಷನ್ ವರೆಗಿನ ದಾರಿ ದೀಪ ಕೆಟ್ಟು ಹೋಗಿದ್ದು, ಸಾರ್ವಜನಿಕರು ಕತ್ತಲೆಯಲ್ಲೇ ಓಡಾಡಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಹೆಣ್ಣುಮಕ್ಕಳು ಭಯಭೀತಿಯಿಂದ ಓಡಾಡುವ ಪರಿಸ್ಥಿತಿ ಇದೆ. ಹೀಗಾಗಿ ಜಿಲ್ಲಾಡಳಿತ, ನಗರಸಭೆ ಹಾಗೂ ಜನಪ್ರತಿನಿಧಿಗಳ ಗಮನ ಸೆಳೆಯಲು ದಾರಿ ದೀಪ ಸರಿಪಡಿಸುವವರೆಗೆ ಪ್ರತಿದಿನ ನಾವು ದೊಂದಿ ಬೆಳಕಿನ ವ್ಯವಸ್ಥೆ ಮಾಡುತ್ತೇವೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ಉಡುಪಿ ಜಿಲ್ಲಾಧ್ಯಕ್ಷ ಅನ್ಸಾರ್ ಅಹಮದ್ ಹೇಳಿದರು.

ವೇದಿಕೆಯ ಉಡುಪಿ ತಾಲೂಕು ಸುಧೀರ್ ಪೂಜಾರಿ, ಶಾಹಿಲ್ ರಹಮತುಲ್ಲಾ, ಮಂಜು, ನಾಸಿರ್ ಯಾಕೂಬ್, ಸುಹೇಲ್, ಇಂತಿಯಾಜ್, ಹಸನ್ ಸಾಹೇಬ್, ಅನಿಲ್ ಸಹಿತ ವೇದಿಕೆಯ 25 ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.