ಉಡುಪಿ: ಮಾನವ ಕಳ್ಳ ಸಾಗಾಣಿಕೆ ದೇಶದ ಅತೀ ದೊಡ್ಡ ಕಾನೂನು ಬಾಹಿರ ಚಟುವಟಿಕೆಯಾಗಿದ್ದು, ಶೀಘ್ರವಾಗಿ ಬೆಳೆಯುತ್ತಿರುವ ವ್ಯವಸ್ಥಿತವಾದ ಅಪರಾಧವಾಗಿದೆ. ಇದನ್ನು ತಡೆಗಟ್ಟುವಲ್ಲಿ ಅಧಿಕಾರಿಗಳು ಸೂಕ್ತ ಕಾನೂನು ಕ್ರಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಹಾಗೂ ವಿವಿಧ ಭಾಗೀದಾರ ಇಲಾಖೆಗಳು ಕೈಜೋಡಿಸಿ ಈ ರೀತಿಯ ಕಾನೂನು ಬಾಹಿರ ಚಟವಟಿಕೆಗಳು ನಡೆಯದಂತೆ ನೋಡಿಕೊಳ್ಳಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮನು ಪಟೇಲ್ ಬಿ.ವೈ ಹೇಳಿದರು.
ಅವರು ಬುಧವಾರ ಬ್ರಹ್ಮಗಿರಿಯ ಜಿಲ್ಲಾ ಬಾಲಭವನದಲ್ಲಿ, ಮಹಿಳೆಯರು ಮತ್ತು ಮಕ್ಕಳ ಅನೈತಿಕ ಸಾಗಾಣಿಕೆ ತಡೆಗಟ್ಟುವಿಕೆ ಕುರಿತು ಕ್ಷೇತ್ರ ಮಟ್ಟದ ವಿವಿಧ ಇಲಾಖೆಯ ಭಾಗೀದಾರರಿಗೆ ತರಬೇತಿ – ಜಿಲ್ಲಾ ಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಶ್ಯಾಮಲಾ ಸಿ.ಕೆ ಮಾತನಾಡಿ, ಮಾನವ ಕಳ್ಳ ಸಾಗಾಣಿಕೆಯು ಅತ್ಯಂತ ಗಂಭೀರ ವಿಚಾರವಾಗಿದೆ. ಇದನ್ನು ತಡೆಗಟ್ಟುವಲ್ಲಿ ಪೋಲೀಸ್, ಕಾರ್ಮಿಕ ಇಲಾಖೆ, ಮೊದಲಾದ ಇಲಾಖೆಯ ಅಧಿಕಾರಿಗಳು ಸಮನ್ವಯದೊಂದಿಗೆ
ಕಾರ್ಯನಿರ್ವಹಿಸಿ ಪ್ರಕರಣಗಳು ನಡೆಯದಂತೆ ಎಚ್ಚರ ವಹಿಸಬೇಕು ಎಂದರು.
ಉಡುಪಿಯ ಉಪ ಪೋಲೀಸ್ ನಿರೀಕ್ಷಕ ಗೋಪಾಲಕೃಷ್ಣ ಜೋಗಿ ಮಾತನಾಡಿ, ಭಾಗೀದಾರ ಇಲಾಖೆಗಳಿಗೆ ಇದೊಂದು ಅರ್ಥಪೂರ್ಣ
ಕಾರ್ಯಾಗಾರವಾಗಿದ್ದು, ತಮ್ಮ ವ್ಯಾಪ್ತಿಯಲ್ಲಿ ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಕ್ಷಣ ಸಮೀಪದ ಪೊಲೀಸ್ ಇಲಾಖೆಯನ್ನು
ಸಂಪರ್ಕಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಎಸ್.ಎಸ್ ಕಾದ್ರೊಳ್ಳಿ ಮಾತನಾಡಿ, ಕಾನೂನುಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಎಲ್ಲಾ ಭಾಗೀದಾರ ಇಲಾಖೆಗಳ ಪಾತ್ರ ಮತ್ತು ಜವಾಬ್ದಾರಿ ಮಹತ್ವದಾಗಿದ್ದು, ಗ್ರಾಮೀಣ ಭಾಗದ ಜನರಿಗೆ ಇದರ ಅರಿವನ್ನು ಮೂಡಿಸುವ ಅವಶ್ಯಕತೆ ಇದೆ ಎಂದು ತಿಳಿಸಿದರು.
ಸಂಪನ್ಮೂಲ ವ್ಯಕ್ತಿಗಳಾಗಿ ನೇಟಿವ್ ಆರ್ಗನೈಸೇಷನ್ ಕುಂದಾಪುರ ವ್ಯವಸ್ಥಾಪಕ ಪೇಮಾನಂದ ಕಲ್ಮಾಡಿ ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆ ತಡೆ ಕುರಿತು ಕ್ರಮಬದ್ಧ ಕಾರ್ಯ ವಿಧಾನ ಎನ್ನುವ ವಿಚಾರದ ಬಗ್ಗೆ ಹಾಗೂ ವಕೀಲೆ ಸೌಮ್ಯ ಅಶೋಕ್ ಮಹಿಳೆಯರ ಮತ್ತು ಮಕ್ಕಳ ಕಳ್ಳ ಸಾಗಾಣಿಕೆ ತಡೆ ಹಾಗೂ ಐಟಿಡಿಪಿ 1956 ಕಾಯ್ದೆಯ ಅನುಷ್ಟಾನ ಕುರಿತಂತೆ ಮಾಹಿತಿ ನೀಡಿದರು.
ಕಾರ್ಯಾಗಾರದಲ್ಲಿ ಜಿಲ್ಲಾ ಉಪನಿರೀಕ್ಷಕರಾದ ನಾರಾಯಣ ಮತ್ತು ಪ್ರಕಾಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ, ಕ್ಷೇತ್ರ ಶಿಕ್ಷಣಾಧಿಕಾರಿಗಳು,
ಶಾಲಾ ಶಿಕ್ಷಣ ಇಲಾಖೆಯ ಪ್ರಾಂಶುಪಾಲರು, ಕಾರ್ಮಿಕ ನಿರೀಕ್ಷಕರು, ಪಂಚಾಯತ್ ಅಭಿವೃದ್ಧಿ ಅಧಿಕಾರಿ, ರಾಜ್ಯ ಮಹಿಳಾ ನಿಲಯ ಅಧೀಕ್ಷಕರು, ಬಾಲಕಿಯರ ಬಾಲಮಂದಿರ, ಬಾಲಕರ ಬಾಲಮಂದಿರ, ಪರಿವೀಕ್ಷಣಾಧಿಕಾರಿ ವೀಕ್ಷಣಾಲಯ, ಹಿರಿಯ ಮೇಲ್ವಿಚಾರಕಿ/ಮೇಲ್ವಿಚಾರಕಿ, ಪ್ರವಾಸೋದ್ಯಮ ಇಲಾಖೆಯ ಪ್ರವಾಸಿಮಿತ್ರರು, ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಸಿಬ್ಬಂದಿ, ಸಖಿ ಒನ್ ಸ್ಟಾಪ್ ಸೆಂಟರ್ ಸಿಬ್ಬಂದಿಗಳು, ಸಾಂತ್ವನ ಮಹಿಳಾ ಸಹಾಯವಾಣಿ ಕೇಂದ್ರ ಉಡುಪಿ, ಕಾರ್ಕಳ, ಕುಂದಾಪುರ ಸಿಬ್ಬಂದಿ, ಆರಕ್ಷಕ ಇಲಾಖಾ ಅಧಿಕಾರಿ/ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಅನುರಾಧಾ ಬಿ ಹಾದಿಮನಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ದೀಪಾ ನಿರೂಪಿಸಿ, ಶಾರದಾ ವಂದಿಸಿದರು.


















