ಉಡುಪಿ: ಕುಂಜಿಬೆಟ್ಟು ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ಪೂರ್ವ ವಸತಿ ನಿಲಯಕ್ಕೆ ಲೋಕಾಯುಕ್ತ ನ್ಯಾಯಾಧೀಶ ಪಿ. ವಿಶ್ವನಾಥ್ ಶೆಟ್ಟಿ ಶುಕ್ರವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ವೇಳೆ ಮಾತನಾಡಿದ ಲೋಕಾಯುಕ್ತರು, ವಸತಿ ನಿಲಯ ತುಂಬಾ ಹಳೆಯದಾಗಿದೆ. ಯಾಕೆ ಹೊಸ ಕಟ್ಟಡ ನಿರ್ಮಾಣ ಮಾಡಿಲ್ಲ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.
ವಸತಿ ನಿಲಯದ ಸುತ್ತ 7.88 ಎಕರೆ ಸರ್ಕಾರಿ ಜಾಗವಿದೆ. ಆದರೆ ಆ ಜಾಗ ವಿವಾದದಲ್ಲಿದ್ದು, 70 ಸೆಂಟ್ಸ್ ಜಾಗದಲ್ಲಿ ಕಂಪೌಂಡ್ ಕಟ್ಟಿಕೊಂಡು ವಸತಿ ಶಾಲೆ ನಡೆಸಲಾಗುತ್ತಿದೆ.
ನೂತನ ಕಟ್ಟಡ ನಿರ್ಮಿಸಲು ಭೂ ವಿವಾದ ಅಡ್ಡಿಯಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಪ್ರಭಾರ ಉಪ ನಿರ್ದೇಶಕ ರಮೇಶ್ ಲೋಕಾಯುಕ್ತರಿಗೆ ತಿಳಿಸಿದರು.
ಸರ್ಕಾರಿ ಜಾಗದಲ್ಲಿ ಒಕ್ಕಲುತನವನ್ನು ಕೇಳಲು ಯಾರಿಗೂ ಕಾನೂನಿನಲ್ಲಿ ಅವಕಾಶವಿಲ್ಲ. ವಸತಿ ನಿಲಯದ ಜಾಗದ ವಿವಾದ ಪ್ರಕರಣವನ್ನು ಸರಿಯಾಗಿ ಪರಿಶೀಲಿಸಿ, ಒಂದು ವೇಳೆ ಸಮಸ್ಯೆ ಬಗೆಹರಿಸಲು ಆಗದಿದ್ದರೆ ಸುಳ್ಳು ದೂರ ದಾಖಲಿಸಿದ್ದಾರೆಂದು ದೂರುದಾರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ. ಸಾರ್ವಜನಿಕ ಹಿತದೃಷ್ಟಿಗೆ ತೊಂದರೆ ನೀಡುವವರ ವಿರುದ್ಧ ಅಧಿಕಾರಿಗಳು ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬಹುದು ಎಂದರು.
ಈ ಬಗ್ಗೆ ದಾಖಲೆ ಸಹಿತ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಲೋಕಾಯುಕ್ತರು ಸೂಚಿಸಿದರು. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುತ್ತೇವೆಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.
ಬಳಿಕ ವಸತಿ ನಿಲಯದ ಆವರಣದಲ್ಲಿ ಬಾಲಕರಿಗೆ ವಿತರಿಸಲು ನಿಲ್ಲಿಸಲಾಗಿದ್ದ ಸೈಕಲ್ಗಳನ್ನು ಲೋಕಾಯುಕ್ತರು ಪರಿಶೀಲಿಸಿದರು. ಬಾಲಕರು ಮಲಗುವ ಕೋಣೆ, ಬೆಡ್, ಮಂಚ, ಸೊಳ್ಳೆ ಪರದೆ, ಶೌಚಾಲಯಗಳನ್ನು ಪರಿಶೀಲನೆ ನಡೆಸಿದರು. ಅಡುಗೆ ಮನೆ ಮತ್ತು ಸಾಮಗ್ರಿ ದಾಸ್ತಾನು ಕೊಠಡಿಗೆ ತೆರಳಿ ಆಹಾರ ಧ್ಯಾನಗಳನ್ನು ಪರಿಶೀಲಿಸಿದರು. ಶುಚಿತ್ವಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ವಸತಿ ನಿಲಯದ ವಾರ್ಡನ್ ಭಾರತಿ ಪದ್ಮಶಾಲಿ ಅವರಿಗೆ ಸಲಹೆ ನೀಡಿದರು.