ಉಡುಪಿ: ನಗರಸಭೆ ವ್ಯಾಪ್ತಿಯ ಕೆಲ ವಾರ್ಡ್‌ಗಳಲ್ಲಿ ಕಳೆದ ಎರಡು ತಿಂಗಳಿನಿಂದ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಈ ಹಿನ್ನೆಲೆಯಲ್ಲಿ ಬಿಜೆಪಿ ನಗರಸಭಾ ಸದಸ್ಯ ಪ್ರಭಾಕರ ಪೂಜಾರಿ ನೇತೃತ್ವದಲ್ಲಿ ಚುನಾಯಿತ ಬಿಜೆಪಿ ಸದಸ್ಯರು ಸೋಮವಾರ ಪೌರಾಯುಕ್ತ ಡಾ. ಆನಂದ ಕಲ್ಲೋಳಿಕರ್ ಅವರನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದರು.
ಕುಡಿಯುವ ನೀರಿನ ನಿರ್ವಹಣೆಯ ವೈಫಲ್ಯದಿಂದ ನಗರದ ಕೆಲವೊಂದು ವಾರ್ಡ್‌ಗಳಲ್ಲಿ ಸರಿಯಾಗಿ ಕುಡಿಯುವ ನೀರಿನ ಸರಬರಾಜು ಆಗುತ್ತಿಲ್ಲ. ಹಾಗಾಗಿ ಸಾರ್ವಜನಿಕರು ಸದಸ್ಯರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸದಸ್ಯರು ಸಂಬಂಧಪಟ್ಟ ಅಧಿಕಾರಿಗಳಿಗೆ ಕರೆ ಮಾಡಿದರೆ, ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ. ಇನ್ನು ಕೆಲವರು ವಿದ್ಯುತ್ ಸಮಸ್ಯೆಯಿಂದ ಬಜೆ ಡ್ಯಾಂನಲ್ಲಿ ನಿರೀಕ್ಷಿತ ಮಟ್ಟದಲ್ಲಿ ನೀರಿನ ಪಂಪಿಂಗ್ ಆಗುತ್ತಿಲ್ಲ ಎಂದು ಸಾಬೂಬು ನೀಡುತ್ತಿದ್ದಾರೆ ಎಂದು ಸದಸ್ಯರು ದೂರಿದರು.
ಮಳೆಗಾಲ ಕಳೆಯುತ್ತಿದ್ದಂತೆ ನೀರಿನ ಸಮಸ್ಯೆ ಉಂಟಾದರೆ, ಮುಂದೆ ಬೇಸಿಗೆಯಲ್ಲಿ ಯಾವ ರೀತಿ ನೀರಿನ ಸಮಸ್ಯೆ ಎದುರಾಗಬಹುದೆಂದು ಜನರು ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಹಾಗಾಗಿ ಇದನ್ನು ಪೌರಾಯುಕ್ತರು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ಪೌರಾಯುಕ್ತರು, ಅಸಮರ್ಪಕ ನಿರ್ವಹಣೆಯಿಂದ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿರುವುದು ನಿಜ. ಈ ಸಮಸ್ಯೆಯನ್ನು ಕೂಡಲೇ ಸರಿಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸುತ್ತೇನೆ. ಅಲ್ಲದೆ ನಗರಸಭೆಯ ಅಧಿಕಾರಿ ವರ್ಗ ಹಾಗೂ ಕುಡಿಯುವ ನೀರು ನಿರ್ವಹಣೆ ಮಾಡುತ್ತಿರುವ ಗುತ್ತಿಗೆದಾರರ ತಂಡವನ್ನು ಮರುರಚನೆ ಮಾಡಿ, ನಗರಸಭಾ ಸದಸ್ಯರು ಮತ್ತು ಅಧಿಕಾರಿಗಳ ಜಂಟಿ ನಿರೀಕ್ಷಣಾ ತಂಡದಿಂದ ನಿರ್ವಹಣೆ
ಮಾಡಲು ಯೋಜನೆ ರೂಪಿಸಲಾಗುವುದು ಎಂದರು.
ಇದೇ ವೇಳೆ ಕಾಮಗಾರಿ ಎಂಜಿನಿಯರ್ ಮೋಹನರಾಜ್ ಜತೆಗೆ ಸಮಾಲೋಚನೆ ನಡೆಸಿದ ಪೌರಾಯುಕ್ತರು, ಈ ಹಿಂದೆ ಇದೇ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ನಿವೃತ್ತ ಅಧಿಕಾರಿಗಳನ್ನು ಸಂರ್ಕಿಸಿ ನೀರಿನ ಕೊಳವೆ ಮಾರ್ಗಗಳು, ಗೇಟ್ ವಾಲ್ವ್‌ಗಳ ಪರಿಶೀಲನೆ ಮತ್ತು ದುರಸ್ಥಿಯ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಬೇಕೆಂದು ಸೂಚನೆ ನೀಡಿದರು.
ನಗರಸಭಾ ಸದಸ್ಯರಾದ ಗಿರೀಶ್ ಅಂಚನ್, ಟಿ.ಜಿ. ಹೆಗ್ಡೆ, ಸಂತೋಷ್ ಜತ್ತನ್, ವಿಜಯ ಕೊಡವೂರು, ಮಂಜುನಾಥ್ ಮಣಿಪಾಲ ಇದ್ದರು.