ಉಡುಪಿ: ಕೊರೊನಾದಿಂದ ಉಡುಪಿ ಶ್ರೀಕೃಷ್ಣಮಠದ ಆದಾಯ ಭಾರೀ ಪ್ರಮಾಣದಲ್ಲಿ ಕಡಿತಗೊಂಡಿದ್ದು, ಈ ಹಿನ್ನೆಲೆಯಲ್ಲಿ ಮಠವು 1 ಕೋಟಿ ರೂ. ಸಾಲಕ್ಕಾಗಿ ಬ್ಯಾಂಕಿಗೆ ಅರ್ಜಿ ಸಲ್ಲಿಸಿದೆ.
ಕೋವಿಡ್ ಲಾಕ್ ಡೌನ್ ವೇಳೆ ಸರ್ಕಾರದ ಆದೇಶದಂತೆ ಮಠಕ್ಕೆ ಭಕ್ತರ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು. ಇದೀಗ ಲಾಕ್ಡೌನ್ ತೆರವಾಗಿದ್ದರೂ ಜಿಲ್ಲೆಯಲ್ಲಿ ಕೊರೊನಾ ಸೋಂಕು ಪ್ರತಿದಿನ ಹೆಚ್ಚಾಗುತ್ತಿರುವ ಕಾರಣಕ್ಕಾಗಿ ಮಠವು ಭಕ್ತರ ಪ್ರವೇಶಕ್ಕೆ ಇನ್ನೂ ಮುಕ್ತವಾಗಿಲ್ಲ. ಇದರಿಂದ ಮಠದ ಆದಾಯ ಸಂಪೂರ್ಣ ನಿಂತುಹೋಗಿದೆ.
ನಿತ್ಯ 1.25 ಲಕ್ಷ ಖರ್ಚು:
ಮಠದಲ್ಲಿ ನಿತ್ಯ ಕೃಷ್ಣ ದೇವರ ಪೂಜೆಯ ಸಾಮಗ್ರಿಗಳು, 300 ಜನಕ್ಕೆ ಅನ್ನ ನೈವೇದ್ಯ, 100 ತೆಂಗಿನಕಾಯಿ, 2 ಡಬ್ಬಿ ತುಪ್ಪ, 1 ಡಬ್ಬಿ ಎಳ್ಳೆಣ್ಣೆ ಬಳಕೆಯಾಗುತ್ತದೆ. ಮಠದ 300 ಮಂದಿ ಸಿಬ್ಬಂದಿಯ ಪೈಕಿ ಅರ್ಧದಷ್ಟು ಸಿಬ್ಬಂದಿಗೆ ರಜೆ ನೀಡಲಾಗಿದೆ. ಆದರೆ ಅವರಿಗೆ ಪೂರ್ಣ ವೇತನ ನೀಡಲಾಗುತ್ತಿದೆ. ಮಠದಲ್ಲಿ ಕೆಲಸ ಮಾಡುವ 150 ಸಿಬ್ಬಂದಿ ಊಟ, ವಿದ್ಯುತ್ ಶುಲ್ಕ ಇತ್ಯಾದಿ ಸೇರಿ ದಿನಕ್ಕೆ 1.25 ಲಕ್ಷ ರೂ.ಗಳಿಗೂ ಅಧಿಕ ಖರ್ಚು ಬರುತ್ತಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.
ಕಳೆದ ಐದಾರು ತಿಂಗಳಿನಿಂದ ಮಠಕ್ಕೆ ಯಾವುದೇ ಆದಾಯವಿಲ್ಲ. ಇದರಿಂದ 1.50 ಕೋಟಿ ರೂ.ಗಳಿಗಿಂತಲೂ ಹೆಚ್ಚು ಖರ್ಚಾಗಿದ್ದು, ಇದನ್ನು ಸರಿದೂಗಿಸಲು ಈಗಾಗಲೇ ಅದಮಾರು ಮಠದಿಂದ 65 ಲಕ್ಷ ಹಾಗೂ ಬ್ಯಾಂಕಿನಿಂದ 20 ಲಕ್ಷ ಸಾಲ ಪಡೆಯಲಾಗಿದೆ. ಈಗ ಮತ್ತೆ ಅನಿವಾರ್ಯವಾಗಿ 1 ಕೋಟಿ ಸಾಲಕ್ಕಾಗಿ ಬ್ಯಾಂಕ್ ನ ಮೊರೆ ಹೋಗಲಾಗಿದೆ ಎಂದು ಮಠದ ಮೂಲಗಳಿಂದ ತಿಳಿದುಬಂದಿದೆ.