ಕೃಷ್ಣನೂರು ಉಡುಪಿಯಲ್ಲಿ ಮುಂಬೈಯ “ಆಲಾರೆ ಗೋವಿಂದ” ತಂಡ: ಏಳು ಅಡಿಯ ಪಿರಮಿಡ್ ನಿರ್ಮಿಸಿ ಮಡಿಕೆ ಒಡೆದು ಸಂಭ್ರಮ

ಉಡುಪಿ: ಉಡುಪಿಯಲ್ಲಿ ವಿಟ್ಲಪಿಂಡಿ ಉತ್ಸವದ ಸಂಭ್ರಮ ನೆಲೆಸಿದೆ. ದೂರದೂರು ಮುಂಬೈಯಿಂದ ಆಗಮಿಸಿದ ಆಲಾರೆ ಗೋವಿಂದ ತಂಡವು ನಗರದ ವಿವಿಧೆಡೆ ಏಳು ಅಡಿಯ ಪಿರಮಿಡ್ ರಚಿಸಿ ಮಡಿಕೆ ಒಡೆದು ಸಂಭ್ರಮಿಸಿತು.

ಮಧುಸೂದನ ಪೂಜಾರಿ ಕೆಮ್ಮುಣ್ಣು ಇವರ ಸಂಯೋಜನೆಯಲ್ಲಿ ಪೂರ್ವ ಮುಂಬೈಯ ಸಾಂತಾಕ್ರೂಸ್ ಬಾಲಮಿತ್ರ ವ್ಯಾಯಾಮ ಶಾಲೆಯ ತಂಡ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಆಲಾರೆ ಗೋವಿಂದ ಪ್ರದರ್ಶನ ನಡೆಸಿತು. ಪರ್ಯಾಯ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥ ಶ್ರೀಪಾದರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಆಲಾರೆ ಗೋವಿಂದ ತಂಡ ಪಿರಮಿಡ್ ರಚಿಸಿ ಮಡಿಕೆ ಒಡೆಯುವ ಪ್ರದರ್ಶನ ನೀಡಿತು.

ತಂಡವು ಬರೋಬ್ಬರಿ ಏಳು ಅಂತಸ್ತಿನ ಮಾನವ ಪಿರಮಿಡ್ ರಚಿಸಿತು. ಪುಟಾಣಿ ಮನಸ್ವಿ ಸಂತೋಷ್ ಪಿರಮಿಡ್‌ನ ತುತ್ತತುದಿಗೇರಿ ಮೊಸರು ಗಡಿಗೆಯನ್ನು ಒಡೆದು ಎಲ್ಲರನ್ನು ರಂಜಿಸಿದ್ದಾಳೆ. ಈ ತಂಡ ವಿಟ್ಲ ಪಿಂಡಿಯ ಪ್ರಯುಕ್ತ ಉಡುಪಿ ಹತ್ತುಕಡೆಗಳಲ್ಲಿ “ಆಲಾರೆ ಗೋವಿಂದ”ವನ್ನು ಪ್ರದರ್ಶಿಸಲಿದೆ.