ಉಡುಪಿ: ಕೃಷ್ಣನೂರು ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಗೆ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಶ್ರೀಕೃಷ್ಣನ ಬಾಲಲೀಲೆಗಳನ್ನು ತೋರಿಸುವ ವಿಟ್ಲಪಿಂಡಿ ಉತ್ಸವ ಉಡುಪಿ ಅಷ್ಟಮಿಯ ಪ್ರಮುಖ ಆಕರ್ಷಣೆಯಾಗಿದೆ.
ಸೆ.14ಕ್ಕೆ ಶ್ರೀಕೃಷ್ಣ ಜನ್ಮಾಷ್ಟಮಿ ಮತ್ತು 15ರಂದು ಕೃಷ್ಣ ಲೀಲೋತ್ಸವಕ್ಕೆ (ವಿಟ್ಲಪಿಂಡಿ) ಭರದ ಸಿದ್ಧತೆ ನಡೆಯುತ್ತಿದ್ದು, ಮೊಸರು ಕುಡಿಕೆ ಉತ್ಸವಕ್ಕೆ ರಥಬೀದಿಯ ಸುತ್ತಲೂ 13 ಮರದ ತ್ರಿಕೋನಾಕೃತಿಯ ಗುರ್ಜಿಗಳ ನಿರ್ಮಾಣ ಪ್ರಕ್ರಿಯೆ ಈಗಾಗಲೇ ಸಂಪೂರ್ಣಗೊಂಡಿದೆ.
ಶ್ರೀ ಕೃಷ್ಣಮಠದ ಪರ್ಯಾಯದ ನಂತರ ಅಷ್ಟಮಿ ಹಬ್ಬಕ್ಕೆ ವಿಶೇಷ ಮಹತ್ವ ಇದೆ. ಎರಡು ದಿನಗಳ ಕಾಲ ನಡೆಯುವ ಅಷ್ಟಮಿಗೆ ಊರ ಪರವೂರ ಸಾವಿರಾರು ಭಕ್ತರು ಆಗಮಿಸುತ್ತಾರೆ.
ಮಠ ಮತ್ತು ಕನಕ ಗೋಪುರದ ಮುಂಭಾಗ ಎರಡು ದಿಕ್ಕಿನಲ್ಲಿ ಬೃಹತ್ ಮಂಟಪದ ಗುರ್ಜಿ ನಿರ್ಮಿಸಲಾಗಿದೆ. ಅಷ್ಟಮಠಕ್ಕೆ ಸಂಬಂಧಿಸಿದ 8, ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ದೇವಸ್ಥಾನದ 2 ಗುರ್ಜಿಗಳು, 3 ಮಂಟಪ ಗುರ್ಜಿಗಳು ಸೇರಿ ಒಟ್ಟು 13 ಗುರ್ಜಿಗಳನ್ನು ರಚಿಸಲಾಗಿದೆ. ಪ್ರತಿ ಗುರ್ಜಿಗಳಲ್ಲಿ ತಲಾ ಮೂರು ಕುಡಿಕೆ ಇರಿಸಲಾಗಿದ್ದು, ಕುಡಿಕೆಗಳಲ್ಲಿ ಮೊಸರು, ಅರಳಿನ ಹುಡಿ, ಅರಿಶಿಣ – ಕುಂಕುಮದ ನೀರು ತುಂಬಿಸಲಾಗುತ್ತದೆ. ಒಟ್ಟು 47 ಮಣ್ಣಿನ ಕುಡಿಕೆಗಳಿಗೆ ಕಲಾತ್ಮಕವಾಗಿ ಬಣ್ಣ ಬಳಿಯಲಾಗಿದೆ.
ಸೆ.14ರಂದು ಬೆಳಗ್ಗೆ 9.30ರಿಂದ ರಾಜಾಂಗಣ, ಮಧ್ವಮಂಟಪ, ಅನ್ನಬ್ರಹ್ಮ ಮೊದಲಾದಕಡೆಗಳಲ್ಲಿ ವಿವಿಧ ವಯೋಮಿತಿಯ ಮಕ್ಕಳ ಕೃಷ್ಣವೇಷ ಸ್ಪರ್ಧೆ ಆಯೋಜಿಸಲಾಗಿದೆ. ಸಂಜೆ 5ಕ್ಕೆ ರಾಜಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಶ್ರೀಕೃಷ್ಣ ಜಯಂತಿ ನಡೆಯಲಿದೆ.

ವಿಟ್ಲಪಿಂಡಿ ಉತ್ಸವದಂದು ಶ್ರೀಕೃಷ್ಣನ ವಿವಿಧ ಬಾಲಲೀಲೆಗಳು ಮಠದ ರಥಬೀದಿಯಲ್ಲಿ ಅನಾವರಣಗೊಳ್ಳಲಿವೆ. ಲಡ್ಡು ಉತ್ಸವ, ಗೊಲ್ಲರ ಮೊಸರು ಕುಡಿಕೆ, ಮುದ್ದು ಕೃಷ್ಣವೇಷಗಳು ಉತ್ಸವಕ್ಕೆ ವಿಶೇಷ ಕಳೆ ನೀಡಲಿವೆ. ಅಷ್ಠಮಿಯಂದು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳದ್ದೇ ಒಂದು ತೂಕವಾದರೆ, ಮಠದೊಳಗೆ ನಡೆಯುವ ವಿವಿಧ ಪೂಜೆ ಪುನಸ್ಕಾರಗಳದ್ದೇ ಇನ್ನೊಂದು ತೂಕ. ಉತ್ಸವದಂದು ಭಕ್ತರಿಗೆಂದೇ ಲಕ್ಷಾಂತರ ಉಂಡೆ ಚಕ್ಕುಲಿ ಯಂತಹ ಪ್ರಸಾದ ತಯಾರಾಗಲಿದೆ. ಅಷ್ಟಮಠಾಧೀಶರು ಉತ್ಸವದಲ್ಲಿ ಪಾಲ್ಗೊಂಡು ಭಕ್ತರಿಗೆ ಪ್ರಸಾದ ಹಂಚಲಿದ್ದಾರೆ. ಒಟ್ಟಾರೆ ಪೊಡವಿಗೊಡೆಯ ಕೃಷ್ಣನ ಜನ್ಮದಿನ ಕೃಷ್ಣಮಠದಲ್ಲಿ ವಿಶೇಷವಾಗಿ ಆಚರಣೆಗೊಳ್ಳಲಿದ್ದು, ಭಕ್ತರು ಕಾತುರದಿಂದ ಇದಕ್ಕಾಗಿ ಕಾಯುತ್ತಿದ್ದಾರೆ.

















