ಉಡುಪಿ: ರಾಜ್ಯ ಸರ್ಕಾರದ ಆದೇಶದಂತೆ ಜಿಲ್ಲಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯ ನೇತೃತ್ವದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೊಲೀಸ್ ಅಧಿಕಾರಿಗಳು ಇಂದು ಜಿಲ್ಲೆಯಾದ್ಯಂತ ಕೋವಿಡ್ ನಿಯಮ ಉಲ್ಲಂಘನೆ ವಿರುದ್ಧ ಕಾರ್ಯಾಚರಣೆ ನಡೆಸಿದರು.
ಈ ವೇಳೆ ಕೋವಿಡ್ ನಿಯಮವನ್ನು ಉಲ್ಲಂಘಿಸಿ ಸಂಚರಿಸುತ್ತಿದ್ದ ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು.
ಕುಂದಾಪುರ ತಾಲೂಕಿನಲ್ಲಿ ಸಹಾಯಕ ಆಯುಕ್ತರು ಮತ್ತು ತಹಶೀಲ್ದಾರ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಯಿತು. ಹಾಗೆ, ಕಾರ್ಕಳ ಹಾಗೂ ಬೈಂದೂರು ತಾಲ್ಲೂಕುಗಳಲ್ಲಿ ಆಯಾ ತಾಲೂಕಿನ ತಹಶೀಲ್ದಾರರ ನೇತೃತ್ವದಲ್ಲಿ ಅಧಿಕಾರಿಗಳು ವಿಶೇಷ ಕಾರ್ಯಾಚರಣೆ ನಡೆಸಿದರು.
ಜಿಲ್ಲೆಯಾದ್ಯಂತ ನಡೆದ ವಿಶೇಷ ಕಾರ್ಯಾಚರಣೆಯಲ್ಲಿ 75 ದ್ವಿಚಕ್ರ, 2 ತ್ರಿಚಕ್ರ ಹಾಗೂ 17 ನಾಲ್ಕು ಚಕ್ರದ ವಾಹನ ಸಹಿತ 94 ವಾಹನಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಯಿತು. ಅಲ್ಲದೆ, ನಿಯಮಬಾಹಿರವಾಗಿ ತೆರೆಯಲಾಗಿದ್ದ ಅನೇಕ ಅಂಗಡಿಗಳನ್ನು ಖಡಕ್ ಎಚ್ಚರಿಕೆ ನೀಡಿ ಮುಚ್ಚಲಾಯಿತು. ಕೋವಿಡ್ ನಿಯಮ ಉಲ್ಲಂಘನೆ ಪ್ರಕರಣಕ್ಕೆ ಸಂಬಂಧಿಸಿ ಇಂದು ಜಿಲ್ಲೆಯಲ್ಲಿ ಒಟ್ಟು ₹ 70 ಸಾವಿರ ದಂಡ ವಸೂಲಿ ಮಾಡಲಾಯಿತು.
ಈ ಸಂದರ್ಭದಲ್ಲಿ ಸಾರ್ವಜನಿಕರು ನಿತ್ಯಬಳಕೆಯ ವಸ್ತುಗಳನ್ನು ಖರೀದಿಸಲು ಇರುವ ಅವಕಾಶವನ್ನು ತುಂಬಾ ದೂರ ತಿರುಗಾಡಲು ದುರ್ಬಳಕೆ ಮಾಡುವುದು ಕಂಡುಬಂದಿದೆ. ದಿನಸಿ, ತರಕಾರಿ, ಮೀನು ಮುಂತಾದ ನಿತ್ಯ ಬಳಕೆಯ ವಸ್ತುಗಳನ್ನು ತಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲೇ ಖರೀದಿಸಬೇಕಲ್ಲದೆ ದೂರ ಅಲೆದಾಡಲು ಹೊರಗೆ ಬಂದಲ್ಲಿ ಅಂತಹ ವಾಹನಗಳನ್ನು ಮುಟ್ಟುಗೋಲು ಹಾಕಿಕೊಂಡು ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಎಚ್ಚರಿಕೆಯನ್ನು ನೀಡಲಾಗಿದೆ. ಅದೇ ರೀತಿ ನಿಯಮಬಾಹಿರವಾಗಿ ಅನುಮತಿ ಇಲ್ಲದ ಯಾವುದೇ ಅಂಗಡಿಯನ್ನು ತೆರೆಯುವಂತಿಲ್ಲ. ತೆರೆದಲ್ಲಿ ಅಂತಹ ಅಂಗಡಿಗಳ ಪರವಾನಿಗೆಯನ್ನು ಕೋವಿಡ್ ಮುಗಿಯುವ ತನಕ ಅಮಾನತುಗೊಳಿಸಲಾಗುವುದು ಎಂದು ಡಿಸಿ ಎಚ್ಚರಿಕೆ ನೀಡಿದ್ದಾರೆ.
ಸಾರ್ವಜನಿಕರು ಇಂತಹ ಸಂದಿಗ್ದ ಪರಿಸ್ಥಿತಿಯಲ್ಲಿ ಪ್ರಸ್ತುತ ವಸ್ತುಸ್ಥಿತಿಯನ್ನು ಅರ್ಥಮಾಡಿಕೊಂಡು ಅನಾವಶ್ಯಕವಾಗಿ ಹೊರಗಡೆ ಓಡಾಡದಂತೆ ಎಚ್ಚರಿಕೆ ವಹಿಸಲು ಹಾಗೂ ಜಿಲ್ಲಾಡಳಿತದೊಂದಿಗೆ ಸಹಕರಿಸಲು ಕೋರಲಾಗಿದೆ.