ಉಡುಪಿ: ಗುಣಮಟ್ಟದ ಟೈಲರಿಂಗ್ ಮಾಡುವವರಿಗೆ ಯಾವತ್ತು ಕೂಡ ಬೇಡಿಕೆ ಕಡಿಮೆ ಆಗುವುದಿಲ್ಲ. ಹೊಸ ವ್ಯವಸ್ಥೆಗಳು ಬಂದಾಗ ಅದನ್ನು ಸವಾಲು ಆಗಿ ಸ್ವೀಕರಿಸಿ ನಾವು ಕೂಡ ಹೊಸತನ್ನು ಕೊಡಲು ಪ್ರಯತ್ನಿಸಬೇಕು. ಇದರಿಂದ ವೃತ್ತಿಗೆ ಯಾವುದೇ ಧಕ್ಕೆ ಬರುವುದಿಲ್ಲ ಎಂದು ಮೀನುಗಾರಿಕೆ, ಬಂದರು ಮತ್ತು ಮುಜರಾಯಿ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ಉಡುಪಿ ಕ್ಷೇತ್ರ ಸಮಿತಿಯ ಆಶ್ರಯದಲ್ಲಿ ಉಡುಪಿ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ಭಾನುವಾರ ಆಯೋಜಿಸಿದ್ದ ಸ್ಮಾರ್ಟ್‌ಕಾರ್ಡ್ ವಿತರಣೆ ಮತ್ತು ಕ್ರೀಡಾಕೂಟ ಹಾಗೂ ಮಹಾಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ಆನ್‌ಲೈನ್ ಬಟ್ಟೆ ಖರೀದಿ ವ್ಯವಸ್ಥೆಯಿಂದ ಟೈಲರ್ಸ್‌ಗಳ ವೃತ್ತಿಗೆ ಹೊಡೆತ ಬೀಳುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿವೆ. ಆದರೆ ಟೈಲರಿಂಗ್‌ನಲ್ಲಿ ಗುಣಮಟ್ಟ ಕಾಯ್ದುಕೊಳ್ಳುವುದರ ಜತೆಗೆ ಗ್ರಾಹಕರಿಗೆ ಸಮಯಕ್ಕೆ ಸರಿಯಾಗಿ ಪೂರೈಕೆ ಮಾಡಿದಲ್ಲಿ ಯಾವತ್ತೂ ಬೇಡಿಕೆ ಕುಗ್ಗುವುದಿಲ್ಲ ಎಂದರು.
ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಶನ್ ರಾಜ್ಯಾಧ್ಯಕ್ಷ ಕೆ.ಎಸ್. ಆನಂದ ಮಾತನಾಡಿ, ನಾವು ಮತ ಹಾಕಿ ಗೆಲ್ಲಿಸುವ ಶಾಸಕರು, ಸಂಸದರಿಗೆ ಜೀವ ಮಾನ ಇಡೀ ಪಿಂಚಣಿ ನೀಡಲಾಗುತ್ತದೆ. ಅದೇ ರೀತಿ ಟೈಲರ್ಸ್‌ಗಳಿಗೂ ಸರ್ಕಾರ ಸಾಮಾಜಿಕ ಭದ್ರತೆಯನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.
ಉಡುಪಿ ಕಾರ್ಮಿಕ ಅಧಿಕಾರಿ ಜೀವನ್ ಕುಮಾರ್ ಸ್ಮಾಟ್‌ಕಾರ್ಡ್ ಕುರಿತು ಮಾಹಿತಿ ನೀಡಿದರು. ಸಂಸ್ಥೆಯ ಉಡುಪಿ ಕ್ಷೇತ್ರ ಸಮಿತಿಯ ಅಧ್ಯಕ್ಷ ಗುರುರಾಜ ಎಂ. ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ವಸಂತ, ರಾಜ್ಯ ಕೋಶಾಧಿಕಾರಿ ಅಬ್ದುಲ್ ಖಾದರ್, ಉದ್ಯಮಿ ಸುರೇಶ್, ಸಂಸ್ಥೆಯ ಜಿಲ್ಲಾಧ್ಯಕ್ಷ ಕೆ. ರಾಮಚಂದ್ರ, ಪ್ರಧಾನ ಕಾರ್ಯದರ್ಶಿ ಸಾವಿತ್ರಿ ಟಿ. ಸಾಲ್ಯಾನ್, ಕೋಶಾಧಿಕಾರಿ ಸತೀಶ್ ಆರ್. ದೇವಾಡಿಗ
ಶಿರ್ವ ಉಪಸ್ಥಿತರಿದ್ದರು.
ಕ್ಷೇತ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ದಯಾನಂದ ಕೋಟ್ಯಾನ್ ಕೊರಂಗ್ರಪಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಗಣೇಶ್ ಶೆಟ್ಟಿಗಾರ್ ವಂದಿಸಿದರು.
ಬೇಡಿಕೆ ಕುರಿತು ಸಿಎಂ ಜತೆ ಚರ್ಚೆ
ನ. 15ರೊಳಗೆ ಮುಖ್ಯಮಂತ್ರಿ ಜತೆಗೆ ಟೈಲರ್ಸ್ ಸಂಘಟನೆಗಳ ಪದಾಧಿಕಾರಿಗಳ ಸಭೆ ನಡೆಸಿ ಟೈಲರ್ಸ್‌ಗಳ ವಿವಿಧ ಬೇಡಿಕೆಗಳನ್ನು ಚರ್ಚಿಸಲು ಚಿಂತಿಸಲಾಗಿದೆ. ಕೇವಲ ಮುಖ್ಯಮಂತ್ರಿಯನ್ನು ನಿಯೋಗ ಭೇಟಿ ಮಾಡಿ ಮನವಿ ಕೊಟ್ಟರೆ ಯಾವುದೇ ಪ್ರಯೋಜನ ಇಲ್ಲ. ಅದರ ಬದಲು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿಯ ಜತೆಗೆ ಸಭೆ
ನಡೆಸಿ ಟೈಲರ್ಸ್‌ಗಳ ಮಕ್ಕಳ ಶಿಕ್ಷಣ, ವಿವಾಹ, ಆರೋಗ್ಯ, ಅನಾಹುತ ಸಂಭವಿಸಿದಾಗ ಪರಿಹಾರ. ಮತ್ತು ಪಿಂಚಣಿ ಕುರಿತು ಚರ್ಚೆ ನಡೆಸಲಾಗುವುದು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.