ಉಡುಪಿ: ಪಾರ್ಟಿ ಮತ್ತು ಮುಖ್ಯಮಂತ್ರಿಗಳು ಕೊಟ್ಟ ಅವಕಾಶ ಉಪಯೋಗಿಸಿಕೊಂಡು ಸರ್ಕಾರದ ಗೌರವ ಹೆಚ್ಚಿಸುವ ಕೆಲಸ ಮಾಡಲು ಶ್ರಮವಹಿಸಿ ದುಡಿಯುವ ನಿರ್ಧಾರ ಮಾಡಿದ್ದೇನೆ. ಈ ಮಧ್ಯೆ ಉಡುಪಿ ಜಿಲ್ಲೆಯ ಉಸ್ತುವಾರಿ ಬಗ್ಗೆ ನಡೆಯುತ್ತಿರುವ ಸಾರ್ವಜನಿಕ ವರದಿ ಕಾರ್ಯಕರ್ತರಲ್ಲಿ ಮತ್ತು ಜನಸಾಮಾನ್ಯರಲ್ಲಿ ನಿತ್ಯ ಚರ್ಚೆಯ ವಿಷಯವಾಗಿ ಮಾರ್ಪಡುತ್ತಿದೆ. ಇಲ್ಲಿಯವರೆಗೂ ನನ್ನ ಪಾರ್ಟಿ ಕೊಟ್ಟ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸಿದ ನನಗೆ ಇದರಿಂದ ಸಹಜವಾಗಿಯೇ ಮುಜುಗರವಾಗುತ್ತಿದೆ.
ಆದ್ದರಿಂದ ನನ್ನ ಸಮಾಜವೂ ಸೇರಿದಂತೆ ನನ್ನೆಲ್ಲಾ ಆತ್ಮೀಯರು ಉಡುಪಿ ಜಿಲ್ಲಾ ಉಸ್ತುವಾರಿ ಮಂತ್ರಿಯ ವಿಚಾರದಲ್ಲಿ ನಡೆಯುತ್ತಿರುವ ಚರ್ಚೆ ಮತ್ತು ವಾದವನ್ನು ಇಲ್ಲಿಗೆ ಮುಗಿಸಬೇಕು ಎಂದು ಮೀನುಗಾರಿಕೆ, ಬಂದರು ಒಳನಾಡು ಜಲ ಸಾರಿಗೆ ಹಾಗೂ ಮುಜರಾಯಿ ಮಂತ್ರಿ ಕೋಟ ಶ್ರೀನಿವಾಸ ಪೂಜಾರಿ ಅವರು ಸಾರ್ವಜನಿಕವಾಗಿ ವಿನಂತಿ ಮಾಡಿದ್ದಾರೆ. ಚರ್ಚೆಯ ಬದಲು ತಮ್ಮೆಲ್ಲರ ಮಾರ್ಗದರ್ಶನ ನನಗೆ ಶಕ್ತಿ ಕೊಡಲಿದೆ ಎಂದವರು ಹೇಳಿಕೆಯಲ್ಲಿ ವಿನಂತಿಸಿದ್ದಾರೆ.