ಕಾಪು ಮಾರಿಯಮ್ಮನ ದೇವಸ್ಥಾನಕ್ಕೆ ನಟಿ ದೀಪಿಕಾ ದಾಸ್ ಭೇಟಿ; ನವದುರ್ಗಾ ಲೇಖನ ಯಜ್ಞ ಸಂಕಲ್ಪ ಸ್ವೀಕಾರ

ಉಡುಪಿ: ಖ್ಯಾತ ನಟಿ ದೀಪಿಕಾ ದಾಸ್ ಅವರು ಪ್ರಸಿದ್ಧ ಕಾಪು ಶ್ರೀ ಹೊಸ ಮಾರಿಗುಡಿ ದೇವಸ್ಥಾನಕ್ಕೆ ಭೇಟಿ ನೀಡಿದರು. ಉಚ್ಚಂಗಿ ಸಹಿತ ಶ್ರೀ ಮಾರಿಯಮ್ಮನ ದರ್ಶನ ಪಡೆದರು. ಬಳಿಕ‌ ಅವರನ್ನು ದೇವಳದ ವ್ಯವಸ್ಥಾಪನಾ ಸಮಿತಿ ಮತ್ತು ಅಭಿವೃದ್ಧಿ ಸಮಿತಿಯಿಂದ ಗೌರವಿಸಲಾಯಿತು.

ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಶ್ರೀನಿವಾಸ ತಂತ್ರಿ ಕಲ್ಯ ಅವರು ಅಮ್ಮನ ಅನುಗ್ರಹ ಪ್ರಸಾದ ನೀಡಿದರು. ಈ ವೇಳೆ ದೇವಳದ ಅಭಿವೃದ್ಧಿ, ಘಂಟಾನಾದ ಸೇವೆ ಮತ್ತು ನವದುರ್ಗಾ ಲೇಖನ ಯಜ್ಞದ ಬಗ್ಗೆ ಮಾಹಿತಿ ಪಡೆದುಕೊಂಡು, ನವದುರ್ಗಾ ಲೇಖನವನ್ನು ಬರೆಯುವುದಾಗಿ ಸಂಕಲ್ಪ ಸ್ವೀಕರಿಸಿ, ಲೇಖನ ಪುಸ್ತಕವನ್ನು ಪಡೆದುಕೊಂಡರು. ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರತ್ನಾಕರ ಶೆಟ್ಟಿ ನಡಿಕೆರೆ, ಸದಸ್ಯ ರವೀಂದ್ರ ಮಲ್ಲಾರ್, ಘಂಟಾನಾದ ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕಾಪು ಜಯರಾಮ ಆಚಾರ್ಯ ಹಾಗೂ ಮತ್ತಿತರರು ಉಪಸ್ಥಿತರಿದ್ದರು.