ಎನ್ಆರ್ ಸಿ ಮೂಲಕ‌ ದೇಶದ ಮೂಲನಿವಾಸಿಗಳನ್ನು ವಿದೇಶಿಯರನ್ನಾಗಿಸುವ ಹುನ್ನಾರ: ಪ್ರೊ. ವಿಲಾಸ್ ಖಾರಾತ್ ಆರೋಪ

ಉಡುಪಿ: ಬ್ರಾಹ್ಮಣರು ಎನ್‌ಆರ್‌ಸಿ ಕಾಯ್ದೆಯ ಮೂಲಕ ಇಲ್ಲಿನ ಮೂಲ ನಿವಾಸಿಗಳನ್ನು ವಿದೇಶಿಯರನ್ನಾಗಿ ಮಾಡುವ ಷಡ್ಯಂತ್ರ ರೂಪಿಸುತ್ತಿದ್ದಾರೆ. ಎನ್‌ಆರ್‌ಸಿ ಪಟ್ಟಿಯಿಂದ ಹೊರಗುಳಿಯುವ ಜನರ ಮತದಾನದ ಹಕ್ಕನ್ನು ಸಹ ಕಸಿದುಕೊಳ್ಳುತ್ತಾರೆ. ಆದ್ದರಿಂದ ಕೇವಲ ಜೈ ಭೀಮ್‌ ಘೋಷಣೆ ಕೂಗುವುದರಿಂದ ಸಮಸ್ಯೆ ಬಗೆಹರಿಯುವುದಿಲ್ಲ. ಜನರನ್ನು ಜಾಗೃತರನ್ನಾಗಿ ಮಾಡುವ ಅಗತ್ಯವಿದೆ ಎಂದು ಭಾರತೀಯ ಮುಕ್ತಿ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ
ಪ್ರೊ. ವಿಲಾಸ್‌ ಖಾರಾತ್‌ ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ಬೆಂಗಳೂರು ಇದರ ವತಿಯಿಂದ ಗಣರಾಜ್ಯೋತ್ಸವ ದಿನಾಚರಣೆಯ ಅಂಗವಾಗಿ ಉಡುಪಿ ಬಾಸೆಲ್ ಮಿಷನ್ ಸ್ಮಾರಕ ಆಡಿಟೋರಿಯಂನಲ್ಲಿ ಭಾನುವಾರ ಆಯೋಜಿಸಿದ್ದ ಏಕತೆಗಾಗಿ ಸ್ವಾಭಿಮಾನದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ಡಿಎನ್‌ಎ ಸರಿಹೊಂದದಿದ್ದರೆ ದೇಶದಿಂದ ಹೊರಗಟ್ಟಿ:
ಬ್ರಾಹ್ಮಣರು ವಿದೇಶದಿಂದ ಭಾರತಕ್ಕೆ ವಲಸೆ ಬಂದವರು. ಅವರ ಡಿಎನ್‌ಎ ಇಲ್ಲಿನ ಮೂಲ ನಿವಾಸಿಗಳೊಂದಿಗೆ ಹೊಂದಾಣಿಕೆ ಆಗುವುದಿಲ್ಲ. ಹಾಗಾಗಿ ಎನ್‌ಆರ್‌ಸಿಯನ್ನು ಡಿಎನ್‌ಎ ಆಧಾರದಲ್ಲಿ ಮಾಡಬೇಕು. ಯಾರ ಡಿಎನ್‌ಎ ಇಲ್ಲಿನ ಮೂಲ ನಿವಾಸಿಗಳೊಂದಿಗೆ ಹೊಂದಾಣಿಕೆ ಆಗುವುದಿಲ್ಲವೋ ಅವರನ್ನು ಭಾರತದಿಂದ ಹೊರಹಾಕಬೇಕು ಎಂದು ಅವರು ಒತ್ತಾಯಿಸಿದರು.
ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿ 70 ವರ್ಷಗಳು ಕಳೆದರೂ, ಇಲ್ಲಿನ ಮೂಲ ನಿವಾಸಿಗಳಾದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗದವರಿಗೆ (ಬಹುಜನರು) ಇನ್ನೂ ಸ್ವಾತಂತ್ರ್ಯ ದೊರೆತಿಲ್ಲ. ಸಾವಿರಾರು ವರ್ಷಗಳಿಂದ ಮೇಲ್ವರ್ಗದವರ
ಅನ್ಯಾಯ, ದೌರ್ಜನ್ಯ ಸಹಿಸಿಕೊಂಡು ಬದುಕುತ್ತಿದ್ದು, ಇದರಿಂದ ನಾವು ಮುಕ್ತರಾಗಬೇಕಾದರೆ ಸಂಘಟಿತರಾಗಿ ಹೋರಾಡಬೇಕಾದ ಅವಶ್ಯಕತೆ ಇದೆ ಎಂದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮಘರ್ಜನೆ) ರಾಜ್ಯ ಸಂಚಾಲಕ ಉದಯ ಕುಮಾರ್‌ ತಲ್ಲೂರು ಅಧ್ಯಕ್ಷತೆ ವಹಿಸಿದ್ದರು. ಚಿಂತಕ ನಾರಾಯಣ ಮಣೂರು, ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಜಾಕೀರ್‌ ಹುಸೇನ್‌, ಧರ್ಮಗುರು ವಿಲಿಯಂ ಮಾರ್ಟಿಸ್‌, ಉಡುಪಿ ಜಿಲ್ಲಾ ಮುಸ್ಲಿ ಒಕ್ಕೂಟದ ಅಧ್ಯಕ್ಷ ಯಾಸೀನ್‌ ಮಲ್ಪೆ, ಗುರುಮಿಠಕಲ್‌ ಶಿಶು ಅಭಿವೃದ್ಧಿ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಯೋಜನಾಧಿಕಾರಿ ವನಜಾಕ್ಷಿ ಅಶೋಕ್‌, ದಸಂಸ ರಾಜ್ಯ ಕೋಶಾಧಿಕಾರಿ ಕೃಷ್ಣಪ್ಪ, ಬಹುಜನ ಮುಕ್ತಿ ಮೋರ್ಚಾದ ವಿಭಾಗ ಸಂಚಾಲಕ ತೊಫಿಕ್‌, ದಸಂಸ ಜಿಲ್ಲಾ ಸಂಚಾಲಕ ಚಂದ್ರ ಅಲ್ತಾರು, ಸದ್ದಾಂ ಹುಸೇನ್‌, ಮರಿಯಪ್ಪ, ಅಂಬಿಕಾ ಉಪಸ್ಥಿತರಿದ್ದರು.
ಜಿ.ಎ. ನಾಗಪ್ಪ ಸ್ವಾಗತಿಸಿದರು. ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಕಲ್ಲದೇವನಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೀವ ಕಾರ್ಯಕ್ರಮ ನಿರೂಪಿಸಿದರು.