ಉಡುಪಿ: ಸ್ವಾತಂತ್ರ್ಯ ದೊರೆತ ದಿನದಿಂದ ಆಳುವ ವ್ಯವಸ್ಥೆ ಮನುಧರ್ಮ ಶಾಸನ, ಮನುವಾದಿ ಸಿದ್ದಾಂತವನ್ನು ಅಂಬೇಡ್ಕರ್ ಜಾರಿಗೊಳಿಸಿದ ಸಮಾನತೆಯ ಸಂವಿಧಾನದ ಒಳಗೆ ತುರುಕಿಸಿ, ತನ್ನ ಅಧಿಕಾರವನ್ನು ವ್ಯವಸ್ಥಿತವಾಗಿ ಕಾಪಾಡಿಕೊಂಡು ಬಂದಿದೆ ಎಂದು ದಲಿತ ಚಿಂತಕ ನಾರಾಯಣ ಮಣೂರು ಹೇಳಿದರು.
ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಮೂಡುಬೆಟ್ಟು ನಗರ ಶಾಖೆಯ ಆಶ್ರಯದಲ್ಲಿ ಮೂಡುಬೆಟ್ಟು ಅಂಬೇಡ್ಕರ್ ಸಮುದಾಯ ಭವನದಲ್ಲಿ ಭಾನುವಾರ ಆಯೋಜಿಸಿದ ದಲಿತ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಈ ದೇಶವನ್ನು ನಾಶ ಮಾಡಲು ಇಲ್ಲಿನ ಶಿಕ್ಷಣ ವ್ಯವಸ್ಥೆಯ ತಳ ತಪ್ಪಿಸಿ ಬಿಟ್ಟರೆ ಸಾಕು.
ನಾವು ಶತಮಾನಗಳಿಂದ ಶೋಷಣೆಗೆ ಒಳಗಾದ ಮನುಧರ್ಮಗಳ ವಿಚಾರವನ್ನು ಶಾಲಾ ಕಾಲೇಜುಗಳಲ್ಲಿ ಓದುತ್ತಿದ್ದೇವೆ. ಕಸ ಒಂದು ಜನಾಂಗದ ವೃತ್ತಿ ಎಂಬುದಾಗಿ ಜನಾಂಗವನ್ನು ನಂಬಿಸಿ ಕೆಲಸ ಮಾಡುವಂತೆ ಪ್ರೇರಿಸುವ ಶಿಕ್ಷಣ ವ್ಯವಸ್ಥೆಯನ್ನು ಸೃಷ್ಠಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮುಖ್ಯ ಶಿಕ್ಷಕರಾಗಿ ನಿವೃತ್ತರಾದ ದಸಂಸ ರಾಜ್ಯ ಸಮಿತಿ ಸದಸ್ಯ ಸುಂದರ್ ಮಾಸ್ತರ್ ಅವರನ್ನು ಸನ್ಮಾನಿಸಲಾಯಿತು.
ಮಲ್ಪೆ ಠಾಣೆಯ ಎಎಸ್‌ಐ ಕೆ. ರತ್ನಾಕರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. ದಸಂಸ ಉಡುಪಿ ತಾಲ್ಲೂಕು ಪ್ರಧಾನ ಸಂಚಾಲಕ ಪರಮೇಶ್ವರ ಉಪ್ಪೂರು ಅಧ್ಯಕ್ಷತೆ ವಹಿಸಿದ್ದರು.
ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಎಸ್.ಎಸ್. ಪ್ರಸಾದ್, ಮಹಿಳಾ ಪೊಲೀಸ್ ಠಾಣೆಯ ಎಎಸ್‌ಐ ಕೆ. ಮುಕ್ತ, ದಸಂಸ ಪಡುಬಿದ್ರಿ ವಲಯದ ಪ್ರಧಾನ ಸಂಚಾಲಕ ಲೋಕೇಶ್ ಕಂಚಿನಡ್ಕ, ಮೂಡುಬೆಟ್ಟು ಅಂಬೇಡ್ಕರ್ ಯುವಕಮಂಡಲದ ಅಧ್ಯಕ್ಷ ಸುರೇಂದ್ರ ಕೋಟ್ಯಾನ್, ಮೂಡುಬೆಟ್ಟು ಅಂಬೇಡ್ಕರ್ ಮಹಿಳಾ ಮಂಡಲದ ಅಧ್ಯಕ್ಷೆ ಜಾನಕಿ ಶಂಕರ್‌ದಾಸ್, ಆಶ್ರಯದಾತ ಆಟೋಯೂನಿಯನ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿವಾನಂದ ಮೂಡುಬೆಟ್ಟು ಮೊದಲಾದವರು ಉಪಸ್ಥಿತರಿದ್ದರು.
ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಭಾಸ್ಕರ್ ಮಾಸ್ತರ್ ಪ್ರಾಸ್ತಾವನೆಗೈದರು. ಜಾನಪದ ಕಲಾವಿದ ಶಂಕರ್‌ದಾಸ್ ಚೆಂಡ್ಕಳ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ಚೆನ್ನಂಗಡಿ ವಂದಿಸಿದರು.